ಧರಣಿಗೆ ದೊರೆಯೆಂದು ನಂಬಿದೆ

ಪಲ್ಲವಿ:

ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ

ಚರಣಗಳು:
ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ

ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡುಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರು ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜ ಜನಕ ಶ್ರೀ ಪುರಂದರ ವಿಟ್ಠಲ

Advertisements

ಇವನ ಹಿಡಕೊಂಡು ಹೋಗೆಲೋ ಜೋಗಿ

ಇವನ ಪಿಡಿದುಕೊಂಡು ಹೋಗೆಲೋ ಜೋಗಿ
ಇವ ನಮ್ಮ ಮಾತು ಕೇಳದೆ ಪುಂಡನಾದ ||ಪ||

ಆಡುತಾಡುತ ಹೋಗಿ ನೀರಲ್ಲಿ ಮುಳುಗಿದ |
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಪೊತ್ತ |
ದಾಡೆಯ ಮೇಲೆ ತಾ ಧಾರುಣಿ ನೆಗಹಿದ |
ನೋಡಿದವರಿಗೆ ಬಾಯ್ ತೆರೆದಂಜಿಸಿದ ||೧||

ಹುಲ್ಲಲ್ಲಿ ವಿಪ್ರನ ಕಣ್ಣು ತಿವಿದ ಬುದ್ಧಿ |
ಅಲ್ಲವೆಂದರೆ ಕೈಲಿ ಕೊಡಲಿಯ ಪಿಡಿದಾ |
ಬಿಲ್ಲು ಪಿಡಿದು ಬಲು ರಕ್ಕಸರ ಸವರಿದ |
ಬಲ್ಲಿದ ಮಾವನ ಶಿರವ ಛೇದಿಸಿದ ||೨||

ಬೆತ್ತಲೆ ಕುದುರೆಯ ಹತ್ತಬೇಡೆಂದರೆ |
ಹತ್ತಿದನು ಈತ ಛಂದದಿಂದ |
ಭಕ್ತವತ್ಸಲ ನಮ್ಮ ಪುರಂದರ ವಿಠಲನ |
ಎತ್ತಲಾದರೂ ಕೊಂಡು ಹೋಗೆಲೋ ಜೋಗಿ ||೩ ||

ಕಾಳಿಯ ಮರ್ದನ ರಂಗಗೆ

ಪಲ್ಲವಿ: 

ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು
ಚರಣ: 

ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ

ಮೂರಡಿ ಭೂಮಿಯ ಬೇಡಿದನೆ ನೃಪರ ಬೇರನಳಿಯ ಕೊಡಲಿ ಪಿಡಿದನೆ
ನಾರಮಡಿಯನಿಟ್ಟು ಬಂದನೆ ಅಹ ಚೋರತನದಿ ಪಾಲ್ ಬೆಣ್ಣೆಯ ತಿಂದನೆ

ಬತ್ತಲೆ ನಾರಿಯರನಪ್ಪಿದ ಹೋಗಿ ಉತ್ತಮಾಶ್ವವವನು ಹತ್ತಿದ
ಹತ್ತವತಾರ ತಾಳಿದ ನಮ್ಮ ಭಕ್ತವತ್ಸಲ ಸ್ವಾಮಿ ಪುರಂದರ ವಿಠಲನು

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?

ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೇ ?
ಕರಿಯ ಜಟೆಯ ಜೋಗಿಗಿಂತ ಉತ್ತಮನಲ್ಲವೇನೆ ?

ಜಲಧಿಯೊಳು ವಾಸವೇನೆ ಮನೆಗಳು ಇಲ್ಲವೆ ?
ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೇ ?

ಮಂದರ ಗಿರಿಯ ಪೊತ್ತಿಹುದು ಏನು ಚಂದವೇ ?
ಕಂದನ ಒಯ್ದು ಅಡವಿಯಲ್ಲಿಡುವುದು ಯಾವ ನ್ಯಾಯವೇ ?

ಮಣ್ಣನು ಅಗೆದು ಬೇರನು ಮೆಲುವುದು ಏನು ಸ್ವಾದವೇ ?
ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ?

ಮುತ್ತಿನ ಹಾರ ಇರಲು ಕರುಳ ಮಾಲೆಯ ಧರಿಸುವರೇ ?
ನಿತ್ಯ ರುಂಡ ಮಾಲೆಯ ಧರಿಸೋದು ಯಾವ ನ್ಯಾಯವೇ ?

ಗಿಡ್ಡನಾಗಿ ಬೆಳೆದು ಅಳೆವುದು ಏನು ನ್ಯಾಯವೇ ?
ಗುಡ್ಡದ ಮಗಳ ತಂದೆಗೆ ಮುನಿಯೋದು ಯಾವ ನ್ಯಾಯವೇ ?

ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ ?
ಕ್ಷಿತಿಕಂಠನಾಗಿ ಇರುವೋದು ಯಾವ ನ್ಯಾಯವೇ ?

ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ ?
ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ ?

ಹಾವಿನ ಹೆಡೆಯ ತುಳಿವರೇನೇ ಅಂಜಿಕಿಲ್ಲವೇ ?
ಹಾವೇ ಮಯ್ಯಿಗೆ ಸುತ್ತಿ ಇರಲು ಹ್ಯಾಂಗೆ ಜೀವಿಪನೇ ?

ಬತ್ತಲು ಇರುವನೇನು ಅವಗೆ ನಾಚಿಕಿಲ್ಲವೇ ?
ಸತ್ತ ಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ ?

ಉತ್ತಮ ತೇಜಿ ಇರಲು ಧರೆಯೊಳು ಹದ್ದನು ಏರ್ವರೇ ?
ಎತ್ತಿನ ಬೆನ್ನು ಏರಿದವರು ಬುದ್ಧಿವಂತರೇ ?

ಹರಿಹರರಿಗೆ ಸಾಮ್ಯವೇನೆ ಹೇಳೆ ರುಕ್ಮಿಣೀ ?
ಪುರಂದರ ವಿಠಲ ಸರ್ವೋತ್ತಮ ಕೇಳೆ ಭವಾನಿ!

ಪೊಂಗೊಳಲೂದುತಿಹ

ಪಲ್ಲವಿ:

ಪೊಂಗೊಳಲೂದುತಿಹ ಯದುಕುಲೋತ್ತುಂಗ

ಅನುಪಲ್ಲವಿ:

ತಿಂಗಳಪಾಂಗನೆ ರಜತ ಶುಭಾಂಗ

ಚರಣ:

1:

ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ

ಬಲಿಯ ಬೇಡಿದನು ಭೃಗು ಕುಲದಿ ಜನಿಸಿ

ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ

ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 

2:

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ

ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ

ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ

 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 

3:

ವಾರಿಚರ ಕೂರ್ಮಾವತಾರ ಸೂಕರ ಕ್ರೂರ

ಧರಣಿಯನೆಳೆದು ಶೂರರನು ಗೆಲಿದು

ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು

ಏರಿದನು ಹಯವ ಪುರಂದರ ವಿಠಲ ಜಗದೊಡೆಯ

ಮಕುಟಕ್ಕೆ ಮಂಗಳ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಗಗೆ

ವಕ್ಷಕ್ಕೆ ಮಂಗಳ ವಟು ವಾಮನನಿಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ
ಕುಕ್ಷಿಗೆ ಮಂಗಳ ಕೃಷ್ಣರಾಯಗೆ

ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಕಲ್ಕಿಗೇ
ಪರಿಪರಿ ಮಂಗಳ ಪರಮಾತ್ಮಗೆ
ಪುರಂದರ ವಿಟ್ಠಲಗೆ ಜಯಮಂಗಳ

ಪಂಕಜ ಮುಖಿಯರೆಲ್ಲರು ಬಂದು

ಪಲ್ಲವಿ:

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ

ಚರಣ:

1:

ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ

2:

ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ
ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ

3:

ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ
ಭಕ್ತರ ಸಲಹುವ ಪುರಂದರ ವಿಟ್ಠಲಗೆ ಮುತ್ತೈದೆಯರಾರತಿ ಎತ್ತಿರೆ