ಬಾ ಬಾ ರಂಗ

ಪಲ್ಲವಿ:

ಬಾ ಬಾ ರಂಗ ಭುಜಂಗ ಶಯನ ಕೋಮಲಾಂಗ ಕೃಪಾಂಗ

ಅನುಪಲ್ಲವಿ:
ಬಾ ಬಾ ಎನ್ನಂತರಂಗ ಮಲ್ಲರ ಗಜ ಸಿಂಗ ದುರಿತ ಭವ ಭಂಗ

ಚರಣಗಳು:


ಉಭಯ ಕಾವೇರಿಯ ಮಧ್ಯ ನಿವಾಸ ಅಭಯ ದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ ಇಭ ವರದನೆ ಶ್ರೀನಿವಾಸ

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ ಕಾಳಿಯ ದೇವರ ದೇವ
ಸೋಳ ಸಾಸಿರ ಗೋಪಿಯರಾಳಿದ ಈರೇಳು ಲೋಕದ ಜನಕಾವ

ಚಂದ್ರ ಪುಷ್ಕರಿಣಿಯ ತೀರ ವಿಹಾರ ಇಂದ್ರಾದಿ ಸುರ ಪರಿವಾರ
ಚಂದ್ರಶೇಖರನುತನಾದ ಸುಖಸಾಂದ್ರ ಸುಗುಣ ಗಂಭೀರ

ರಕ್ಷಣ ತ್ರಯಗಳ ದೂಷಿತ ನಿರತ ಅಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿಭೀಷಣಗೊಲಿದ ಸುಪ್ರಾಣ

ಶಂಬರಾರಿಯ ಪಿತ ಡಂಭರಹಿತ ಮನ ಅಂಬುಜದಳ ನಿಭ ನೇತ್ರ
ಶಂಖ ಚಕ್ರಧರ ಪುರಂದರ ವಿಟ್ಠಲ ತುಂಬುರು ನಾರದ ಕೃತ ಸ್ತೋತ್ರ

Advertisements

ಅಂಗನೆಯರೆಲ್ಲ ನೆರೆದು

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಚರಣ

1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

2:

ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

3:

ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ

ಅಂಬಿಗ ನಾ ನಿನ್ನ ನಂಬಿದೆ

ಪಲ್ಲವಿ:
ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆ

ಚರಣ:

1:

ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ

2:

ಹೊಳೆವ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ

3:

ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ

4:

ಸತ್ಯವೆಂಬುವ ಹುಟ್ಟು ಅಂಬಿಗ ಸದಾ ಭಕ್ತಿಯೆಂಬುದೆ ಪಥ ಅಂಬಿಗ
ನಿತ್ಯ ಮೂರುತಿ ಪುರಂದರ ವಿಟ್ಠಲ ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ

ಒಲ್ಲೆನೆ ವೈದಿಕ ಗಂಡನ

ಒಲ್ಲೆನೆ ವೈದಿಕ ಗಂಡನ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||

ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ
ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||

ಕೃಷ್ಣಾಜಿವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ
ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||

ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,
ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||

ಆದದ್ದೆಲ್ಲ ಒಳಿತೆ ಆಯಿತು

ಆದದ್ದೆಲ್ಲ ಒಳಿತೆ ಆಯಿತು, ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು

ಚರಣಗಳು:

ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನಿ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತಿದ್ದೆ
ಸರಸಿಜಾಕ್ಷ ಪುರಂದರ ವಿಟ್ಠಲನು ತುಳಸಿ ಮಾಲೆ ಹಾಕಿಸಿದನಯ್ಯ

ಆಡ ಹೋದಲ್ಲೆ

ಪಲ್ಲವಿ:
ಆಡ ಹೋದಲ್ಲೆ ಮಕ್ಕಳು ಆಡಿಕೊಂಬುವರು ನೋಡಮ್ಮ

ಅನುಪಲ್ಲವಿ:
ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ

ಚರಣಗಳು:

ದೇವಕಿ ಹೆತ್ತಳಂತೆ ವಸುದೇವನೆಂಬುವ ಪಿತನಂತೆ
ಕಾವಲಲಿ ಹುಟ್ಟಿದೆಯಂತೆ ಮಾವಗಂಜಿಲ್ಲಿ ತಂದರಂತೆ ||

ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ ಶಿಶುಗಾಲಲೊರಸಿದೆನಂತೆ ||

ನೀನೆನ್ನ ಹಡೆದಿಲ್ಲವಂತೆ ನಾ ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ||

ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ ಕೊಚ್ಚಲು ಧುಮಿಕಿದೆನಂತೆ ||

ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ ಮುದ್ದು ಪುರಂದರ ವಿಟ್ಟಲನಂತೆ ||

ಆಚಾರವಿಲ್ಲದ ನಾಲಿಗೆ

ಪಲ್ಲವಿ:
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

ಅನುಪಲ್ಲವಿ:
ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ

ಚರಣ:

ಪ್ರಾತಃಕಾಲದೊಳೆದ್ದು ನಾಲಿಗೆ , ಸಿರಿ ಪತಿಯೆನ್ನ ಬಾರದೆ ನಾಲಿಗೆ
ಪತಿತ ಪಾವನ ನಮ್ಮ ರಜಪತಿ ಜನಕನ, ಸತತವು ನುಡಿ ಕಂಡ್ಯ ನಾಲಿಗೆ

ಚಾಡಿ ಹೇಳಲು ಬೇಡ ನಾಲಿಗೆ , ನಿನ್ನ ಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ , ಪಾಡುತಲಿರು ಕಂಡ್ಯ ನಾಲಿಗೆ

ಹರಿಯ ಸ್ಮರಣೆ ಮಾಡು ನಾಲಿಗೆ , ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಟ್ಟಲ ರಾಯನ ಚರಣ ಕಮಲ ನೆನೆ ನಾಲಿಗೆ