• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಪುರಂದರ ದರ್ಶನ, ಇನ್ನು ಹರಿದಾಸ ಸಂಪದದಲ್ಲಿ

ನಮಸ್ಕಾರ

ನೀವು ಪುರಂದರ ದಾಸರ ರಚನೆಯೊಂದನ್ನು ಹುಡುಕುತ್ತಾ ಇಲ್ಲಿಗೆ ಬಂದಿರಬಹುದು.ಇದೇನು, ಹಲವು ದಿನಗಳಿಂದ ಇಲ್ಲಿ ಯಾವ ರಚನೆಯೂ ಹೊಸದಾಗಿ ಬಂದಿಲ್ಲವೆಂದುಕೊಂಡಿರಬಹುದು. ಅದಕ್ಕೆ ಕಾರಣವೂ ಇದೆ.

ಕೆಲವು ತಿಂಗಳ ಹಿಂದೆ ಅಂತರ್ಜಾಲದಲ್ಲಿ ದಾಸ ಸಾಹಿತ್ಯಕ್ಕೆಂದೇ ಮೀಸಲಾದ ಹರಿದಾಸ ಸಂಪದ ಆರಂಭವಾಗಿದೆ. ಹಾಗಾಗಿ, ನಾನು ಪುರಂದರ ದಾಸರ ರಚನೆಗಳನ್ನು ಹಾಕುವ ಬದಲು ಹರಿದಾಸ ಸಂಪದದಲ್ಲಿ ಹಾಕತೊಡಗಿರುವೆ. ಅಷ್ಟೇ ಅಲ್ಲದೆ, ಇತರ ದಾಸರ ರಚನೆಗಳೂ, ದಾಸರ ಬಗ್ಗೆ ಬರಹಗಳೂ ಅಲ್ಲಿ ನಿಮಗೆ ಸಿಗುತ್ತವೆ.

ನಿಮಗೆ ಯಾವುದಾದರೂ ದೇವರನಾಮ/ಉಗಾಭೋಗ/ಸುಳಾದಿಯ ಸಾಹಿತ್ಯ ಬೇಕಿದ್ದರೆ ನೀವು ಈ ಬ್ಲಾಗ್ ನಲ್ಲಿ ಟಿಪ್ಪಣಿ ಹಾಕುವುದನ್ನು  ಮುಂದುವರಿಸಬಹುದು. ಆ ರಚನೆಗಳನ್ನು ಹರಿದಾಸ ಸಂಪದದಲ್ಲಿ ಹಾಕುವೆ. ಮತ್ತೆ ನಿಮಗೆ ದಾಸ ಸಾಹಿತ್ಯದಲ್ಲಿ ಆಸಕ್ತಿಯಿದ್ದು ಬರಹಗಳನ್ನು ಬರೆಯಲು, ಅಥವಾ ರಚನೆಗಳನ್ನು ಬೆರಳಚ್ಚಿಸಿ ಹರಿದಾಸ ಸಂಪದಕ್ಕೆ ಹಾಕುವ ಕೆಲಸದಲ್ಲಿ ಆಸಕ್ತಿ ಇದ್ದರೆ ಒಂದು ಟಿಪ್ಪಣಿ ಹಾಕಿ ನನ್ನನ್ನು ಸಂಪರ್ಕಿಸಿ.

ಕನ್ನಡಿಗರಿಗೆ ಅಂತರ್ಜಾಲದಲ್ಲಿ ಸುಪರಿಚಿತ ಸಂಪದ.ನೆಟ್ ನ ಕೊಡುಗೆಯಾದ  ಹರಿದಾಸ ಸಂಪದ ಕ್ಕೆ ಹೋಗಲು ಇಲ್ಲಿ ಚಿಟಕಿಸಿ.

-ನೀಲಾಂಜನ.

Advertisements

ಧಣಿಯ ನೋಡಿದೆನಾ ವೆಂಕಟನ

ಧಣಿಯ ನೋಡಿದೆನಾ ವೆಂಕಟನ ಮನ-
ದಣಿಯೇ ನೋಡಿದೆನಾ! ||ಪಲ್ಲವಿ||

ಧಣಿಯ ನೋಡಿದೆ ಶಿಖಾಮಣಿ ತಿರುಮಲನಾ! ||ಅನುಪಲ್ಲವಿ||

ಕೇಸಕ್ಕಿ ಅನ್ನ ಉಂಬುವನಾ ಬಡ್ಡಿ
ಕಾಸು ಬಿಡದೇ ಹೊನ್ನ ಗಳಿಸುವನಾ!
ದೋಸೆ ಅನ್ನವ ಮಾರಿಸುವನಾ ತನ್ನ
ದಾಸರ ಮ್ಯಾಳದಿ ಕುಣಿದಾಡುತಿಹನಾ! ||೧||

ಬೆಟ್ಟದೊಳಗೆ ಇರುತಿಹನ ಮನ
ಮುಟ್ಟಿ ಭಜಿಪರಿಗಿಷ್ಟವ ಸಲ್ಲಿಸುವನಾ!
ಕೊಟ್ಟ ವರವ ತಪ್ಪದವನ
ಸೃಷ್ಟಿಗಧಿಕ ಶ್ರೀ ಪುರಂದರ ವಿಠಲನ! ||೨||

ಇನ್ನೂ ದಯಬಾರದೆ ?

ಪಲ್ಲವಿ: 

ಇನ್ನೂ ದಯಬಾರದೆ ದಾಸನ ಮೇಲೆ ?

ಅನುಪಲ್ಲವಿ:
ಪನ್ನಗಶಯನ ಪರಮಪುರುಷ ಹರಿಯೇ!

ಚರಣಗಳು:

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ ಪಾಮರನಾಗಿಹ ಪಾತಕಿಯು
ಮಾ ಮನೋಹರನೆ ಚಿತ್ತಜ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ

ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಾಧೀನವಲ್ಲೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ

ಕಾಳಿಯ ಮರ್ದನ ರಂಗಗೆ

ಪಲ್ಲವಿ: 

ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು
ಚರಣ: 

ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ

ಮೂರಡಿ ಭೂಮಿಯ ಬೇಡಿದನೆ ನೃಪರ ಬೇರನಳಿಯ ಕೊಡಲಿ ಪಿಡಿದನೆ
ನಾರಮಡಿಯನಿಟ್ಟು ಬಂದನೆ ಅಹ ಚೋರತನದಿ ಪಾಲ್ ಬೆಣ್ಣೆಯ ತಿಂದನೆ

ಬತ್ತಲೆ ನಾರಿಯರನಪ್ಪಿದ ಹೋಗಿ ಉತ್ತಮಾಶ್ವವವನು ಹತ್ತಿದ
ಹತ್ತವತಾರ ತಾಳಿದ ನಮ್ಮ ಭಕ್ತವತ್ಸಲ ಸ್ವಾಮಿ ಪುರಂದರ ವಿಠಲನು

ಪೊಂಗೊಳಲೂದುತಿಹ

ಪಲ್ಲವಿ:

ಪೊಂಗೊಳಲೂದುತಿಹ ಯದುಕುಲೋತ್ತುಂಗ

ಅನುಪಲ್ಲವಿ:

ತಿಂಗಳಪಾಂಗನೆ ರಜತ ಶುಭಾಂಗ

ಚರಣ:

1:

ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ

ಬಲಿಯ ಬೇಡಿದನು ಭೃಗು ಕುಲದಿ ಜನಿಸಿ

ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ

ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 

2:

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ

ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ

ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ

 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 

3:

ವಾರಿಚರ ಕೂರ್ಮಾವತಾರ ಸೂಕರ ಕ್ರೂರ

ಧರಣಿಯನೆಳೆದು ಶೂರರನು ಗೆಲಿದು

ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು

ಏರಿದನು ಹಯವ ಪುರಂದರ ವಿಠಲ ಜಗದೊಡೆಯ

ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ

ಪುರಂದರ ದಾಸ ಪ್ರಪಂಚಕ್ಕೆ ಸ್ವಾಗತ

ಇಲ್ಲಿ ಪುರಂದರದಾಸರ ರಚನೆಗಳ ಸಾಹಿತ್ಯವನ್ನು ಆಸಕ್ತರಿಗೆ ಕೊಡುವುದು ನನ್ನ ಉದ್ದೇಶ.

ಸಾಹಿತ್ಯದಲ್ಲಿ ಮಿಂಚುವ ಹೊಳಹುಗಳಿಗೆ, ಅಲ್ಲಲ್ಲಿ ಟಿಪ್ಪಣಿ ಹಾಕುವ ಉದ್ದೇಶವೂ ಇದೆ.

ನಿಮಗೆ ಯಾವುದಾದರೂ ಪುರಂದರದಾಸರ ರಚನೆಯನ್ನು ತಿಳಿಯಬೇಕಾಗಿದ್ದರೆ, ಒಂದು ಮರುಟಿಪ್ಪಣಿ ಹಾಕಿ.

ದಿನಾಲೂ, ಒಂದಾದರೂ ರಚನೆಯನ್ನು ಇಲ್ಲಿ ಹಾಕುವ ಉದ್ದೇಶವಿದೆ. ಹೇಗೆ ನಡೆಯುತ್ತದೋ, ನೋಡೋಣ!