ನಿನ್ನಂಥ ಸ್ವಾಮಿ ನನಗುಂಟು

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!

ಇಂದಿನ ದಿನವೇ ಶುಭದಿವು!

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಕ್ರಿಮಿ ಕೀಟನಾಗಿ ಹುಟ್ಟಿದಂದು

ಕ್ರಿಮಿ ಕೀಟನಾಗಿ ಹುಟ್ಟಿದಂದು ಹರಿ ಶರಣೆಂತೆನಲುಂಟೆ |
ಹರಿ ಹರಿಣನಾಗಿ  ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಹಂದಿ ಶುನಕನಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಮರತೀಯೆ ಮನವೆ ನಿನ್ನ ಹಿಂದಿನ ಭವಗಳ ನೊಂದು |
ಮಾನುಷ ದೇಹ ಬಂದಿತೊ ನಿನಗೀಗ |
ಬೇಗ ನೆನೆಯೆಲೊ ಪುರಂದರವಿಠಲರಾಯನ ||

ಆನೆಯು ಕರೆದರೆ

ಆನೆಯು ಕರೆದರೆ ಆದಿಮೂಲ ಬಂದಂತೆ
ಅಜಾಮಿಳನು ಕರೆದರೆ ನಾರಾಯಣನು ಬಂದಂತೆ
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ
ನಿನ್ನ ದಾಸರ ದಾಸನು ನಾ ಕರೆದರೆ
ಎನ್ನ ಪಾಲಿಸಬೇಕು ಪುರಂದರ ವಿಠಲ

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ?
ಏನು ನೋಡಿದರೇನು ಏನು ಮಾಡಿದರೇನು
ಮನದೊಳಗಿನ ತಾಮಸ ಮಾಣದನ್ನಕ್ಕ
ಕೊಳಲ ದನಿಗೆ ಸರ್ಪ ತಲೆದೂಗುವಂದದಿ
ಇದಕೇನು ಮದ್ದು ಪುರಂದರ ವಿಠಲ?