• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಮುಳ್ಳು ಕೊನೆಯ ಮೇಲೆ

೧:  ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨:  ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩:  ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪:  ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫:  ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬:  ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭:  ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ
೮:  ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯:  ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦:  ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧:  ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ ಎರಡು ಸೋಕವು ಒಂದು ತಾಕಲೇ ಇಲ್ಲ
೧೨:  ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!

Advertisements

ಮುಪ್ಪಿನ ಗಂಡನ ಒಲ್ಲೆನು ನಾನು

ಪಲ್ಲವಿ:
ಮುಪ್ಪಿನ ಗಂಡನ ಒಲ್ಲೆನು ನಾನು

ಅನುಪಲ್ಲವಿ:
ತಪ್ಪದೆ ಪಡಿಪಾಟ ಪಡಲಾರೆನಕ್ಕ

ಚರಣ:

1:

ಉದಯದಲ್ಲೇಳಬೇಕು ಉದಕ ಕಾಸಲುಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ

2:

ಮೆತ್ತನೆ ರೊಟ್ಟಿ ಮುದ್ದೆಯ ಮಾಡಲುಬೇಕು
ಒತ್ತಿ ಒದರಿ ಕೂಗಿ ಕರೆಯಲುಬೇಕು
ವಾಕರಿಕೆಯು ಮೂಗಿನ ಸಿಂಬಳ
ಮತ್ತೆ ವೇಳೆಗೆ ಎದ್ದು ತೊಳೆಯಬೇಕಕ್ಕ

3:

ಗೋಣಿ ಹಾಸಲು ಬೇಕು ಬೆನ್ನ ಗುದ್ದಲುಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರ ವಿಟ್ಠಲನ್ನ ನೆನೆಯುತ್ತ
ನಾನೊಂದು ಮೂಲೇಲಿ ಒರಗಬೇಕಕ್ಕ

ಮುಯ್ಯಕ್ಕೆ ಮುಯ್ಯಿ ತೀರಿತು

ಪಲ್ಲವಿ:

ಮುಯ್ಯಕ್ಕೆ ಮುಯ್ಯಿ ತೀರಿತು ಜಗ-

ದಯ್ಯ ವಿಜಯ ಸಹಾಯ ಪಂಢರೀರಾಯ!

ಚರಣಗಳು:

ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಗಳ್ಳ ಕೃಷ್ಣ ಮರೆಯ ಮಾಡಿ
ಚಿನ್ನದ ಪಾತ್ರೆಯ ನೀರು ತಂದಿತ್ತರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||

ಎನ್ನ ಪೆಸರಹೇಳಿ ಸೂಳೆಗೆ ಕಂಕಣ
ವನ್ನು ನೀನು ಕೊಟ್ಟು ನಿಜವ ಮಾಡೆ
ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯ ತೋರಿದೆ ಪಂಢರಿರಾಯ ||

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಕಿತ್ತು ಈಡಾಡೋ ಇನ್ನೊಂದು ಕಂಕಣವ
ಮುಕ್ತಿಗೆ ನೀನಲ್ಲದಾರನು ಕಾಣೆನು
ಮುಕ್ತೀಶ ಪುರಂದರ ವಿಟ್ಠಲ ಪಂಢರಿರಾಯ ||

ಈ ಎರಡು ಚರಣಗಳಿಗೆ ಸ್ವಲ್ಪ ಬೇರೆಯಾದ ಇನ್ನೊಂದು ಪಾಠಾಂತರವೂ ಇದೆ:

ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ-
ವನ್ನು ನೀನಿತ್ತೆ ನಿಜರೂಪದಿ
ಎನ್ನ ಪಿಡಿಸಿ ಪರಮ ಭಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿಕೊಂಡೆಯಯ್ಯ! ||೨||

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧೀನನಾಗಿರಬೇಡವೇ
ಯುಕ್ತಿಯಲಿ ನಿನ್ನಂಥ ದೇವರ ನಾಕಾಣೆ
ಮುಕ್ತೀಶ ಪುರಂದರವಿಟ್ಠಲ ಪಂಢರಿರಾಯ ||೩||

ಮಡಿ ಮಡಿ ಮಡಿಯೆಂದು ಅಡಿಗಡಿಗೆ

ಪಲ್ಲವಿ:

ಮಡಿ ಮಡಿ ಮಡಿಯೆಂದು ಅಡಿಗಡಿಗಹಾರುವೆ ಮಡಿ ಮಾಡು ಬಗೆ ಬೇರುಂಟು

ಅನುಪಲ್ಲವಿ:

ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು

ಚರಣಗಳು:

೧: ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು

೨: ದಶಮಿ ದ್ವಾದಶಿ ಪುಣ್ಯ ದಿನದಲಿ ವಸುದೇವ ಸುತನನು ಪೂಜಿಸದೆ
ದೋಷಕಂಜದೆ ಪರರನ್ನ ಭುಂಜಿಸಿ ಯಮ ಪಾಶಕೆ ಸಿಲುಕುವುದದು ಮಡಿಯೆ

೩: ಹಸಿದು ಭೂಸುರರು ಮಧ್ಯಾಹ್ನ ಕಾಲಕೆ ಕುಸಿದು ಮನಗೆ ಬಳಲುತ ಬಂದರೆ
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು

೪: ಇಚ್ಚೆಯಿಂದ ಮಲ ಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೆ
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು

೫: ಹರಿಯರ ಗುರುಗಳ ಹರಿ ದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ
ಪರಿಪಾಲಿಸು ಎಂದು ಪುರಂದರ ವಿಠಲನ ಇರುಳು ಹಗಲು ಸ್ಮರಿಸುವುದು ಮಡಿಯು

ಮಡಿ ಮಡಿ ಮಡಿಯೆಂದು

ಪಲ್ಲವಿ:

ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ ಮಡಿಯಲ್ಲಿ ಬಂತೆ ಬಿಕನಾಸಿ

ಅನುಪಲ್ಲವಿ:

ಮಡಿಯು ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ

ಚರಣ:

1. ಎಲುವು ಚರ್ಮ ಮಲಮೂತ್ರ ಗುಂಡಿಲಿ ನಲಿವುತ ನಿಂತೆಯ ಬಿಕನಾಸಿ
ನೆಲೆ ಗೊಂಡ ನವ ದ್ವಾರದ ಹೊಲೆಯೊಳು ನರಳುತ ನೀ ಬಿದ್ದೆ ಬಿಕನಾಸಿ

2: ಹುಟ್ಟುತ ಸೂತಕ ಸಾಯಲು ಸೂತಕ ನಟ್ಟ ನಡುವೆಲ್ಲಿ ಬಂತೆ ಬಿಕನಾಸಿ
ಪಟ್ಟಣ ಕಾವೇರಿಲಿ ಮುಳುಗಲು ನಿನ್ನ ಮುಟ್ಟು ಹೋಗುವುದೆ ಬಿಕನಾಸಿ

3: ಚರ್ಮವ ತೊಳೆದರೆ ಕರ್ಮವು ಹೋಗ್ವುದೆ ಮರ್ಮವ ತಿಳಿಯದೆ ಬಿಕನಾಸಿ
ಬೊಮ್ಮನಯ್ಯ ಪುರಂದರ ವಿಟ್ಠಲನ ಪಾಡಿ ನಿರ್ಮಲದಿ ಬಾಳೆ ಬಿಕನಾಸಿ

ಮಕುಟಕ್ಕೆ ಮಂಗಳ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಗಗೆ

ವಕ್ಷಕ್ಕೆ ಮಂಗಳ ವಟು ವಾಮನನಿಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ
ಕುಕ್ಷಿಗೆ ಮಂಗಳ ಕೃಷ್ಣರಾಯಗೆ

ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಕಲ್ಕಿಗೇ
ಪರಿಪರಿ ಮಂಗಳ ಪರಮಾತ್ಮಗೆ
ಪುರಂದರ ವಿಟ್ಠಲಗೆ ಜಯಮಂಗಳ

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ||

ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ
ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹಾವತಾರಗೆ
ತರಳನ್ನ ಕಾಯ್ದಂಥ ನರಸಿಂಹಗೆ ||೧||

ಭೂಮಿಯ ದಾನವ ಬೇಡಿದವಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯರಸ ಶ್ರೀಕೃಷ್ಣಗೆ ||೨||

ಬತ್ತಲೆ ನಿಂತ ಬೌದ್ಧಾವತಾರಗೆ
ಉತ್ತಮಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ಮುದ್ದು ಪುರಂದರ ವಿಟ್ಠಲಗೆ ||೩||