• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಬುತ್ತಿಯ ಕಟ್ಟೋ ಮನುಜ

ಪಲ್ಲವಿ:

ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ

ಅನುಪಲ್ಲವಿ:

ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು

ಚರಣಗಳು:

1.
ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನವಾಗಿ

2:
ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು
ಪರಮ ವೈರಾಗ್ಯದಿಂದಲೆ ಶ್ರೀ ಹರಿಗೆ ಅರ್ಪಿತವೆಂದು

3:
ಕರ್ತು ಪುರಂದರ ವಿಟ್ಟಲ ತತ್ವವೆಂಬ ಬುತ್ತಿಯನು
ಹತ್ತಿರ ತಂದಿಟ್ಟು ಕೊಂಡು ನಿತ್ಯ ಉಂಡು ತೃಪ್ತಿ ಪಡಿರೊ

Advertisements

ಬಾ ಬಾ ರಂಗ

ಪಲ್ಲವಿ:

ಬಾ ಬಾ ರಂಗ ಭುಜಂಗ ಶಯನ ಕೋಮಲಾಂಗ ಕೃಪಾಂಗ

ಅನುಪಲ್ಲವಿ:
ಬಾ ಬಾ ಎನ್ನಂತರಂಗ ಮಲ್ಲರ ಗಜ ಸಿಂಗ ದುರಿತ ಭವ ಭಂಗ

ಚರಣಗಳು:


ಉಭಯ ಕಾವೇರಿಯ ಮಧ್ಯ ನಿವಾಸ ಅಭಯ ದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ ಇಭ ವರದನೆ ಶ್ರೀನಿವಾಸ

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ ಕಾಳಿಯ ದೇವರ ದೇವ
ಸೋಳ ಸಾಸಿರ ಗೋಪಿಯರಾಳಿದ ಈರೇಳು ಲೋಕದ ಜನಕಾವ

ಚಂದ್ರ ಪುಷ್ಕರಿಣಿಯ ತೀರ ವಿಹಾರ ಇಂದ್ರಾದಿ ಸುರ ಪರಿವಾರ
ಚಂದ್ರಶೇಖರನುತನಾದ ಸುಖಸಾಂದ್ರ ಸುಗುಣ ಗಂಭೀರ

ರಕ್ಷಣ ತ್ರಯಗಳ ದೂಷಿತ ನಿರತ ಅಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿಭೀಷಣಗೊಲಿದ ಸುಪ್ರಾಣ

ಶಂಬರಾರಿಯ ಪಿತ ಡಂಭರಹಿತ ಮನ ಅಂಬುಜದಳ ನಿಭ ನೇತ್ರ
ಶಂಖ ಚಕ್ರಧರ ಪುರಂದರ ವಿಟ್ಠಲ ತುಂಬುರು ನಾರದ ಕೃತ ಸ್ತೋತ್ರ

ಬಂದ ನೋಡಿ

ಪಲ್ಲವಿ:

ಬಂದ ನೋಡಿ ಗೋವಿಂದ ಕೃಷ್ಣ

ಅನುಪಲ್ಲವಿ:

ಬಂದ ಆನಂದ ತೀರ್ಥ ಮುನೀಂದ್ರ ವಂದ್ಯ ಹರಿ ನಂದ ಮುಕುಂದನು

ಚರಣ:

1: ಸರಸಿಜಾಕ್ಷ ದೊರೆಯೆ ಸರ್ವರ ಪೊರೆವ ದಯಾನಿಧಿಯೆ
ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು

2: ಇಂದ್ರದೇವ ವಂದ್ಯ ಇಶ್ಟರೈಂದು ಕಾವ್ಯ ನಿತ್ಯಾನಂದ
ಚಂದ್ರ ಕೋಟಿ ಲಾವಣ್ಯ ಮುಖದಲಿ ಸುಂದರ ಅರಳೆಲ ಹಾರಗಳಿಂದಲಿ

3: ಚರಣ ಕಮಲಕಾಂತೆ ಸರ್ವದಾ ಮಾಳ್ಪುದು ದಯವಂತೆ
ತರತರ ಜನರಿಗೆ ಕರೆದು ವರವನೀವ ಸರಸಿಜಾಕ್ಷ ನಮ್ಮ ಪುರಂದರ ವಿಟ್ಠಲನು

ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ ಗೋ-
ವಿಂದನ ದಯ ನಮಗಿರಲಿ (ಪಲ್ಲವಿ)

ಮಂದರಧರ ಗೋವಿಂದ ಮುಕುಂದನ
ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ)

ಚರಣಗಳು:

ಆರು ಅರಿಯದಿರೆಲ್ಲನ ಮುರಾರಿಯು ಎನಗೆ
ಪ್ರಸನ್ನ ಘೋರ ದುರಿತದ ಬನ್ನ ಭಯ ಹಾರಿ|
ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ
ಚರಣ ಸೇವಕರಿಗೆ ಕ್ರೂರ ಯಮನು ಶರಣಾಗತನಲ್ಲವೆ || 1 ||

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಕಪಟದಿಂದ |
ಇರಲು ಆ ಕ್ಷಣದಿಂದ ಹರಿ ಕೃಪೆಯವರಲ್ಲಿದ್ದ
ಕಾರಣ ಬಂದ ದುರಿತ ಭಯವು ಬಯಲಾಯಿತಲ್ಲವೆ || 2||

ಸಿಂಗನ ಪೆಗಲೇರಿ ಸಾಗೆ ಕರಿಭಂಗವೇಕೆ ಮತ್ತವಗೆ
ರಂಗನ ದಯವುಳ್ಳವಗೆ ಭವ ಭಂಗದ ಬಯಕೆಯ ಹಂಗೇ |
ಮಂಗಳ ಮಹಿಮ ಶ್ರೀ ಪುರಂದರ ವಿಟ್ಠಲನ
ಹಿಂಗದ ದಯವೊಂದಿದ್ದರೇ ಸಾಲದೇ || 3 ||

ಬೇನೆ ತಾಳಲಾರೆ ಬಾ ಎನ್ನ ಗಂಡ

ಪಲ್ಲವಿ:
ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು

ಚರಣಗಳು:

ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ
ಹಾಲು ಸಕ್ಕರೆ ಹದ ಮಾಡಿ ತಂದಿಡು ಎರಕದ ಗಿಂಡಿಲಿ ನೀರ ತಾರೊ ಗಂಡ

ಗಸಗಸೆ ಲಡ್ಡಿಗೆ ಹಸನಾದ ಕೆನೆ ಹಾಲು ಬಿಸಿಯ ಹುರಿಗಡಲೆ ಬಿಳಿಯ ಬೆಲ್ಲ
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷ ವಿಷವೆಂದು ನಾ ತಿಂಬೆನೊ

ಹಪ್ಪಳ ಕರಿದಿಡು ಸಂಡಿಗೆ ಹುರಿದಿಡು ತುಪ್ಪದಿ ನಾಲ್ಕು ಚಕ್ಕುಲಿ ಕರಿದು
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು ಬಚ್ಚಲಿಗೆ ಬರುತೇನೆ ನೀರ ಹದಮಾಡೊ

ಎಣ್ಣೆ ಬದನೆಕಾಯಿ ಬೆಣ್ಣೆ ಸಜ್ಜಿಯ ರೊಟ್ಟಿ ಸಣ್ಣಕ್ಕಿಬೋನ ಬದಿಯಲಿಟ್ಟು
ಸಣ್ಣ ತುಂಚಿಯ ಲಿಂಬೆ ಲಲಮಾಗಡಿಬೇರು ಉಣ್ಣುಣ್ಣು ಎಂದರೆ ಉಂಬೆನೊ ಗಂಡ

ಗಂಧ ಕುಂಕುಮವನು ಬದಿಯಲಿ ತಂದಿಡು ಮಡಿಯಲಿ ತಂಬಿಗೆ ನೀರ ತಾರೋ
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ
ಸ್ನಾನ ಮಾಡಿಕೊಂಡು ಸೀರೆಯ ತೆಕ್ಕೊಟ್ಟು ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ

ಸಣ್ಣ ನುಚ್ಚು ಇಟ್ಟುಕೊ ಗೊಡ್‍ಹುಳಿ ಕಾಸಿಕೊ ದೊನ್ನೆಯೊಳಗೆ ತುಪ್ಪ ಬಡಿಸಿಕೊ
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಟ್ಟಲನ ನೆನೆವುತ ನೀನೊಂದು ಮೂಲೆಲಿ ಬಿದ್ದುಕೊಳ್ಳೋ ಗಂಡ

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ?
ಏನು ನೋಡಿದರೇನು ಏನು ಮಾಡಿದರೇನು
ಮನದೊಳಗಿನ ತಾಮಸ ಮಾಣದನ್ನಕ್ಕ
ಕೊಳಲ ದನಿಗೆ ಸರ್ಪ ತಲೆದೂಗುವಂದದಿ
ಇದಕೇನು ಮದ್ದು ಪುರಂದರ ವಿಠಲ? 

ಬಾರಯ್ಯ ವೆಂಕಟರಮಣ

ಪಲ್ಲವಿ:
ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆ
ಅನುಪಲ್ಲವಿ
ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋ
ಚರಣಗಳು:

೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋ
ಮೋದಸೂಕರ ಬಾರೋ ಸದಯಾ ನರಸಿಂಹ ಬಾರೋ

೨: ವಾಮನ ಭಾರ್ಗವನೆ ಬಾರೋ ರಾಮಕೃಷ್ಣನೆ ನೀ ಬಾರೋ
ಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿ ನೀ ಬಾರೋ

೩: ಅರವಿಂದ ನಾಭ ಬಾರೋ ಸುರರ ಪ್ರಭುವೇ ಬಾರೋ
ಪುರುಹೂತ ವಂದ್ಯ ಬಾರೋ ಪುರಂದರ ವಿಠ್ಠಲ ಬಾರೋ