• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಕೇಳಲೊಲ್ಲನೆ ಎನ್ನ ಮಾತನು

ಪಲ್ಲವಿ:
ಕೇಳಲೊಲ್ಲನೆ ಎನ್ನ ಮಾತನು ರಂಗ ಕಾಳಿಯಮರ್ದನ ಕೃಷ್ಣಗೆ ಪೇಳೆ ಗೋಪ್ಯಮ್ಮ ಬುದ್ಧಿ

ಚರಣ :

1: ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ

2: ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ

3: ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಟ್ಠಲ

Advertisements

ಕೂಸನು ಕಂಡೀರ್ಯಾ

ಪಲ್ಲವಿ:

ಕೂಸನು ಕಂಡೀರ್ಯಾ ಗುರು ಮುಖ್ಯಪ್ರಾಣನ ಕಂಡೀರ್ಯಾ

ಅನುಪಲ್ಲವಿ:

ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ

ಚರಣ:

1: ಅಂಜನೆಯುದರದಿ ಹುಟ್ಟಿದ್ದು ಕೂಸು ರಾಮನ ಚರಣಂಗೆ ಎರಗಿದ್ದು ಕೂಸು
ಸೀತೆಗೆ ಉಂಗುರ ಕೊಟ್ಟಿದ್ದು ಕೂಸು ಲಂಕಾಪುರವೆನೆ ಸುಟ್ಟಿದ್ದು ಕೂಸು

2: ಭಂಡಿ ಅನ್ನವ ನುಂಗಿದ್ದು ಕೂಸು ಬಕನ ಪ್ರಾಣವ ಕೊಂದಿದ್ದು ಕೂಸು
ವಿಷದ ಲಡ್ಡುಗೆಯ ಮೆದ್ದಿದ್ದು ಕೂಸು ಮಡದಿಗೆ ಪುಷ್ಪವ ಕೊಟ್ಟಿದ್ದು ಕೂಸು

3: ಮಾಯಾವಾದಿಗಳ ಗೆದ್ದಿದ್ದು ಕೂಸು ದ್ವೈತ ಮತವನುಧ್ಧರಿಸಿದ್ದು ಕೂಸು
ಮಧ್ವ ರಾಯರೆಂಬ ಪೆಸರಿನ ಕೂಸು ಪುರಂದರ ವಿಟ್ಟಲನ ಪ್ರೇಮದ ಕೂಸು

ಈ ಹಾಡನ್ನು ಡಾ.ಬಾಲಮುರಳಿಕೃಷ್ಣ ಅವರ ಕಂಠದಲ್ಲಿ ಕೇಳಲು ಇಲ್ಲಿ ಕ್ಲಿಕ್ಕಿಸಿ.

ಕ್ರಿಮಿ ಕೀಟನಾಗಿ ಹುಟ್ಟಿದಂದು

ಕ್ರಿಮಿ ಕೀಟನಾಗಿ ಹುಟ್ಟಿದಂದು ಹರಿ ಶರಣೆಂತೆನಲುಂಟೆ |
ಹರಿ ಹರಿಣನಾಗಿ  ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಹಂದಿ ಶುನಕನಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಮರತೀಯೆ ಮನವೆ ನಿನ್ನ ಹಿಂದಿನ ಭವಗಳ ನೊಂದು |
ಮಾನುಷ ದೇಹ ಬಂದಿತೊ ನಿನಗೀಗ |
ಬೇಗ ನೆನೆಯೆಲೊ ಪುರಂದರವಿಠಲರಾಯನ ||

ಕಂಡೆ ನಾ ಕನಸಿನಲಿ ಗೋವಿಂದನ

ಕಂಡೆ ನಾ ಕನಸಿನಲಿ ಗೋವಿಂದನ
ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ –
-ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮ ಗೋಚರನ

ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ
ಕರದಲಿ ಕಂಕಣ ನಲಿದೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರತದಿ ಒಪ್ಪುವ ಕರುಣಾಮೂರುತಿಯ

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟವ
ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ

ಮಂಗಳ ವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ

ಕಾಳಿಯ ಮರ್ದನ ರಂಗಗೆ

ಪಲ್ಲವಿ: 

ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು
ಚರಣ: 

ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ

ಮೂರಡಿ ಭೂಮಿಯ ಬೇಡಿದನೆ ನೃಪರ ಬೇರನಳಿಯ ಕೊಡಲಿ ಪಿಡಿದನೆ
ನಾರಮಡಿಯನಿಟ್ಟು ಬಂದನೆ ಅಹ ಚೋರತನದಿ ಪಾಲ್ ಬೆಣ್ಣೆಯ ತಿಂದನೆ

ಬತ್ತಲೆ ನಾರಿಯರನಪ್ಪಿದ ಹೋಗಿ ಉತ್ತಮಾಶ್ವವವನು ಹತ್ತಿದ
ಹತ್ತವತಾರ ತಾಳಿದ ನಮ್ಮ ಭಕ್ತವತ್ಸಲ ಸ್ವಾಮಿ ಪುರಂದರ ವಿಠಲನು

ಕೇಳನೋ ಹರಿ ತಾಳನೋ

ಪಲ್ಲವಿ:

ಕೇಳನೋ ಹರಿ ತಾಳನೊ

ಅನುಪಲ್ಲವಿ:

ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ

ಚರಣ:

1: ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗಾಟ

2: ನಾನಾ ಬಗೆಯ ರಾಗ ಭಾವ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯ ನಾಮ ರಹಿತವಾದ ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

3: ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನಡೆ ನುಡಿಗೆ ಶ್ರೀ ಹರಿಯೆನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ