• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಇದೇ ಸಮಯ ರಂಗ

ಪಲ್ಲವಿ:

ಇದೇ ಸಮಯ ರಂಗ ಬಾರೆಲೊ ಇದೇ ಸಮಯ ಕೃಷ್ಣ ಬಾರೆಲೊ

ಚರಣಗಳು:

1: ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳೇಳಳೋ
ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರುವಳೋ

2: ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡ ಉದಾಸಿಯೋ
ಭಾವನು ಎನ್ನ ಸೇರ ಹೇಸಿಯೋ ನೀನೀ ವೇಳೆಗೆ ಬಂದರೆ ವಾಸಿಯೋ

3: ತಂದೆ ತಾಯಿ ಆಸೆ ಮಾಡೆನೊ ಎನ್ನ ಕಂದನ ಮೇಲೆ ಮನಸಿಡೆನೊ
ಮಂದರಧರ ಪುರಂದರ ವಿಟ್ಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ

Advertisements

ಇಂದಿನ ದಿನವೇ ಶುಭದಿವು!

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಇವನ ಹಿಡಕೊಂಡು ಹೋಗೆಲೋ ಜೋಗಿ

ಇವನ ಪಿಡಿದುಕೊಂಡು ಹೋಗೆಲೋ ಜೋಗಿ
ಇವ ನಮ್ಮ ಮಾತು ಕೇಳದೆ ಪುಂಡನಾದ ||ಪ||

ಆಡುತಾಡುತ ಹೋಗಿ ನೀರಲ್ಲಿ ಮುಳುಗಿದ |
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಪೊತ್ತ |
ದಾಡೆಯ ಮೇಲೆ ತಾ ಧಾರುಣಿ ನೆಗಹಿದ |
ನೋಡಿದವರಿಗೆ ಬಾಯ್ ತೆರೆದಂಜಿಸಿದ ||೧||

ಹುಲ್ಲಲ್ಲಿ ವಿಪ್ರನ ಕಣ್ಣು ತಿವಿದ ಬುದ್ಧಿ |
ಅಲ್ಲವೆಂದರೆ ಕೈಲಿ ಕೊಡಲಿಯ ಪಿಡಿದಾ |
ಬಿಲ್ಲು ಪಿಡಿದು ಬಲು ರಕ್ಕಸರ ಸವರಿದ |
ಬಲ್ಲಿದ ಮಾವನ ಶಿರವ ಛೇದಿಸಿದ ||೨||

ಬೆತ್ತಲೆ ಕುದುರೆಯ ಹತ್ತಬೇಡೆಂದರೆ |
ಹತ್ತಿದನು ಈತ ಛಂದದಿಂದ |
ಭಕ್ತವತ್ಸಲ ನಮ್ಮ ಪುರಂದರ ವಿಠಲನ |
ಎತ್ತಲಾದರೂ ಕೊಂಡು ಹೋಗೆಲೋ ಜೋಗಿ ||೩ ||

ಇನ್ನೂ ದಯಬಾರದೆ ?

ಪಲ್ಲವಿ: 

ಇನ್ನೂ ದಯಬಾರದೆ ದಾಸನ ಮೇಲೆ ?

ಅನುಪಲ್ಲವಿ:
ಪನ್ನಗಶಯನ ಪರಮಪುರುಷ ಹರಿಯೇ!

ಚರಣಗಳು:

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ ಪಾಮರನಾಗಿಹ ಪಾತಕಿಯು
ಮಾ ಮನೋಹರನೆ ಚಿತ್ತಜ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ

ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಾಧೀನವಲ್ಲೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ

ಇವಗೇಕೆ ಶೃಂಗಾರ

ಪಲ್ಲವಿ:
ಇವಗೇಕೆ ಶೃಂಗಾರ ಇವಗೇಕೆ ಬಂಗಾರ?
ಅನುಪಲ್ಲವಿ:
ಕಾಡ ಕರಡಿಯಂತೆ ಪೋಲುವ ದೇಹಕ್ಕೆ
ಚರಣ ೧:
ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ?
ಕೋರೆ ದಾಡೆಯ ಘೋರ ಮುಖಗೇಕೆ ಕನ್ನಡಿ ಕರುಳ ಹಾರ ಧರಿಸಿದವಕೆ ಹಾರ ಪದಕವೇಕೆ?
ಚರಣ ೨:
ನೆಲವನಳೆದವಗೆ ಕಾಲ ಕಿರುಗೆಜ್ಜೆ ಏಕೆ ತಲೆ ತಾಯ ತರಿದವಗೆ ಮರಿಯಾದೆಯೇಕೆ?
ಚೇಲಾರಿವೆಯ ಉಟ್ಟವಗೇಕೆ ಪೀತಾಂಬರ ಪಾಲ ಕದ್ದು ಕುಡಿದವಗೆ ಕುಸುಮ ಕೇಸರಿಯೇಕೆ?
ಚರಣ ೩:
ಬತ್ತಲೆ ನಿಂತಿದ್ದವಗೆ ಕಸ್ತೂರಿ ತಿಲಕವೇಕೆ ಉತ್ತಮ ಹಯವನೇರಿದವಕೆ ಪುಷ್ಪಕವೇಕೆ?
ಚಿತ್ತಜನಯ್ಯ ಶ್ರೀ ಪುರಂದರ ವಿಟ್ಠಲ ಭಕ್ತರ ಸಲಹುವಗೆ ಬಹಿರಂಗದಾಭರಣವೇಕೆ?

ಇವಗೇಕೆ ಪರಿಮಳ

ಇವಗೇಕೆ ಪರಿಮಳ.  ರಾಗ:  ಯದುಕುಲಕಾಂಭೋಜಿ.  ತ್ರಿಪುಟ ತಾಳ.

ಪಲ್ಲವಿ: 

ಇವಗೇಕೆ ಪರಿಮಳ ಇವಗೇಕೆ ಶೃಂಗಾರ ?

ಅನುಪಲ್ಲವಿ:

ನವನೀತ ಚೋರ ನಾರುವ ಗೊಲ್ಲಗೆ ?

ಚರಣ: 

ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ?
ತಲೆದೋರುವವಗೇಕೆ ದಟ್ಟ ಪುನುಗು ?
ಬಲು ಕೇಶದವಗೇಕೆ ಬಾವನ್ನದಾ ಲೇಪ ?
ಸಲೆಕುರೂಪಿನವಗೇಕೆ ಮಂಡೆಸಾದು* ? 

ತುಲಸಿ ಮಾಲೆಯ ಧರಿಸಿದವಗೇಕೆ ಜವ್ವಾಜಿ ?
ಕೊಲೆಗಡುಕಗೇಕೆ ಕುಂಕುಮದ ತಿಲಕ ?
ಅಲೆದಾಡುವವಗೇಕೆ  ಅಂಗರಾಗದ ಸುಖ ?
ಕಳವು ಮಾಡುವವಗೇಕನಂಗ  ಸೊಬಗು ?

ಪರಸತಿಯ ಬಯಸುವಗೆ ಪನ್ನಗ ಶಯನವೇಕೆ?
ಹರಿದಾಡುವನಿಗೇಕೆ ಆದ ಪಗಡಿ** ?
ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ
ಧರೆಗಧಿಕನಾದನೀ ಪುರಂದರ ವಿಟ್ಠಲ

* ನೊಸಲಸಾದು ಎಂಬ ಪಾಠವೂ ಇದೆ.

** ಅಡಪಡವಿಕೆ?