• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಅಂಗನೆಯರೆಲ್ಲ ನೆರೆದು

ಪಲ್ಲವಿ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಚರಣ

1:

ಪಾಡಿ ಮಲ್ಹಾರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

2:

ತಿತ್ತಿರಿ ಮೇಳರಿ ತಾಳ ದಂಡಿಗೆ ಮದ್ದಲೆ ಉತ್ತಮದ ಶಂಖ ಶಬ್ದ ನಾದಗಳಿಂದ
ಸುತ್ತ ಮುತ್ತಿ ನಾರಿಯರ ತತ್ತೈ ತತ್ತೈ ಥಾಯೆಂದು ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

3:

ಕಾಮಿನಿಯರೆಲ್ಲ ನೆರೆದು ಕಂದನಾಟಗಳನಾಡಿ ಪ್ರೇಮದಿಂದ ಬಿಗಿದಪ್ಪಿ ಮುದ್ದಾಡಿ
ಕಾಮಿತ ಫಲವೀವ ಭಕುತ ಜನರೊಡೆಯ ಸ್ವಾಮಿ ಪುರಂದರ ವಿಟ್ಠಲರಾಯನ್ನ

Advertisements

ಅಂಬಿಗ ನಾ ನಿನ್ನ ನಂಬಿದೆ

ಪಲ್ಲವಿ:
ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆ

ಚರಣ:

1:

ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ

2:

ಹೊಳೆವ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ

3:

ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ

4:

ಸತ್ಯವೆಂಬುವ ಹುಟ್ಟು ಅಂಬಿಗ ಸದಾ ಭಕ್ತಿಯೆಂಬುದೆ ಪಥ ಅಂಬಿಗ
ನಿತ್ಯ ಮೂರುತಿ ಪುರಂದರ ವಿಟ್ಠಲ ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ

ತಂಗಾಳಿ ವಶವಲ್ಲವೇ?

ತಂಗಾಳಿ ವಶವಲ್ಲವೇ ||ಪ||

ಅಂಗದೊಳಗೆ ಬೆಳದಿಂಗಳು ತುಂಬಿತು ||ಅ.ಪ||

ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು
ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ ||ಚ1||

ಬಂಗಾರವೊಡಲಿಗೆ ಭಾರವಾಗಿದೆಯೇ ಶೃಂಗರಿಸಕೊಳ ಸೇರಲಿಲ್ಲ
ಅಂಗಜ ಶರತಾಪ ತಾಳಲಾರೆ ನಾನು ಉಂಗುರವು ನಿನಗೆ ಉಚಿತವೇನೇ ಹೆಣ್ಣೇ||ಚ 2||

ಮುನ್ನ ಪುರಂದರ ವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ
ಅನ್ನ ಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೇ ||ಚ 3||

* ಇದೊಂದು ನಾಯಕೀ ಭಾವದ ರಚನೆ. ದಾಸರು ಪುರಂದರ ವಿಠಲನನ್ನು ಕಾಯುತ್ತಿರುವ ಹೆಣ್ಣೊಬ್ಬಳು, ತನ್ನ ಸಖಿಗೆ ಹೇಳುವ ರೀತಿಯಲ್ಲಿ ಅವನ ಮೇಲೆ ತನಗಿರುವ ಮೋಹವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂಗಿ ತೊಟ್ಟೇನೆ

ಪಲ್ಲವಿ
ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ

ಚರಣ:

1:
ಚಕ್ಕುಲಿ ಕೊಡು ಎನಗೆ ಗೋಪಿ
ಅಕ್ಕರದಿ ಬಂದೆನೆ ಗೊಲ್ಲರ
ಮಕ್ಕಳ ಎಲ್ಲರೊಡ ಗೂಡಿ ಹಲವು
ಗೋವ್ಗಳ ಕಾಯ್ದು ಬಂದೆನೆ

2:
ಅಮ್ಮಣ್ಣಿ ಕೊಡು ಎನಗೆ ಗೋಪಿ
ಬೆಣ್ಣೆಯ ತೋರೆ ಮೇಲೆ
ಗಮ್ಮನೆ ತಟಕನೆ ಮೊಸರನೆ ಸವಿದು
ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು

3:

ಅಪ್ಪಚ್ಚಿ ಕೊಡು ಎನಗೆ ಗೋಪಿ
ತುಪ್ಪವ ಕೊಡೆ ಮೇಲೆ
ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ
ಉಪ್ಪು ಕಡಲೆಯನ್ನು ಚೀಲದಿ ತುಂಬುವೆ

4:

ಚೆಂಡು ಕೊಡು ಎನಗೆ ಗೋಪಿ
ಚಿನಿಕೋಲು ಬೇಕಲ್ಲ
ಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ
ಹಿಂಡು ಗೋವುಗಳ ಕಾಯ್ದು ಬಂದೆನೆ

5:

ಈ ಲೀಲೆಗಳ ಕೇಳಿ ಗೋಪಿ
ತೋಳಿನೊಳ್ ಬಿಗಿದಪ್ಪಿ
ಶ್ರೀಲೋಲ ಪುರಂದರ ವಿಟ್ಠಲನ
ಲೀಲೆಯಿಂದಲಿ ಬಾರೆನುತ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ

ಪಲ್ಲವಿ:

ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ :

ಅಂಬುಜನಾಭ ದಯದಿಂದ ಎನ್ನ ಮನೆಗೆ

ಚರಣಗಳು: 

ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1||

ಕಣ್ಣ ಬಿಡುವನು ತನ್ನ ಬೆನ್ನ ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣನಣ್ಣ ಬೆಣ್ಣೆಯ ಕಳ್ಳ ಮನೆಯ ಬಿಟ್ಟು ಕುದುರೆಯನೇರಿದ || 2||

ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ
ಶೂರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರ ವಿಟ್ಠಲ ಮನೆಗೆ ತಾ ಬಂದ ಚರಣ ||  3 ||