• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲಾ ತಾನಾದ||1||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪವುಂಟೇ
ಲವದಲ್ಲಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿಹೋದರು||2||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ||3||

Advertisements

ಆಡಹೋದಲ್ಲೆ ಮಕ್ಕಳು

ಪಲ್ಲವಿ:

ಆಡ ಹೋದಲ್ಲೆ ಮಕ್ಕಳು ಆಡಿಕೊಂಬುವರು ನೋಡಮ್ಮ

ಅನುಪಲ್ಲವಿ:
ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ

ಚರಣಗಳು:

ದೇವಕಿ ಹೆತ್ತಳಂತೆ ವಸುದೇವನೆಂಬುವ ಪಿತನಂತೆ
ಕಾವಲಲಿ ಹುಟ್ಟಿದೆಯಂತೆ ಮಾವಗಂಜಿಲ್ಲಿ ತಂದರಂತೆ ||೧||

ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ ಶಿಶುಗಾಲಲೊರಸಿದೆನಂತೆ ||೨||

ನೀನೆನ್ನ ಹಡೆದಿಲ್ಲವಂತೆ ನಾನು ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ ||೩||

ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ ಕೊಚ್ಚಲು ಧುಮಿಕಿದೆನಂತೆ ||೪||

ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ ಮುದ್ದು ಪುರಂದರ ವಿಟ್ಟಲನಂತೆ ||೫||

ಆಚಾರವಿಲ್ಲದ ನಾಲಿಗೆ

ಪಲ್ಲವಿ:
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ


ಅನುಪಲ್ಲವಿ:

ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ

ಚರಣಗಳು:

ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿ ಪತಿಯೆನ್ನ ಬಾರದೆ ನಾಲಿಗೆ
ಪತಿತ ಪಾವನ ನಮ್ಮ ರಜಪತಿ ಜನಕನ, ಸತತವು ನುಡಿ ಕಂಡ್ಯ ನಾಲಿಗೆ ||೧||

ಚಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬುವೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ , ಪಾಡುತಲಿರು ಕಂಡ್ಯ ನಾಲಿಗೆ ||೨||

ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಟ್ಟಲ ರಾಯನ ಚರಣ ಕಮಲ ನೆನೆ ನಾಲಿಗೆ ||೩||
“”

ಗೋವಿಂದಾ ನಿನ್ನ ನಾಮವೆ ಚಂದ

ಪಲ್ಲವಿ

ಗೋವಿಂದಾ ನಿನ್ನ ನಾಮವೆ ಚಂದ ಗೋವಿಂದ ನಿನ್ನ ನಾಮವೆ ಚಂದ

ಅನುಪಲ್ಲವಿ

ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ

ಚರಣ
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ
ಪರಮ ಪುರುಷ ಶ್ರೀ ಪುರಂದರ ವಿಟ್ಠಲನ ಹಿಂಗದ ದಾಸರ ಸಲಹುವುದೆ ಆನಂದ

ದಯಮಾಡೋ ರಂಗ

ಪಲ್ಲವಿ

ದಯಮಾಡೋ ರಂಗ ದಯಮಾಡೋ
ದಯಮಾಡೋ ನಿನ್ನ ದಾಸನೆಂದೆಣಿಸಿ

ಅನುಪಲ್ಲವಿ

ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ

ಚರಣಗಳು:

ಇಹ ಪರ ಗತಿ ನೀನೇ ಇಂದಿರ ರಮಣ
ಸಹಾಯ ನಿನ್ನದೆ ಸರ್ವದಾ ತೋರಿ ಕರುಣ ||೧||

ಕರಿರಾಜ ವರದನೇ ಕಾಮಿತ ಫಲದ
ಪುರಂದರವಿಠಲ ಹರಿ ಸಾರ್ವಭೌಮ ||೨||

ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ ಗೋ-
ವಿಂದನ ದಯ ನಮಗಿರಲಿ (ಪಲ್ಲವಿ)

ಮಂದರಧರ ಗೋವಿಂದ ಮುಕುಂದನ
ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ)

ಚರಣಗಳು:

ಆರು ಅರಿಯದಿರೆಲ್ಲನ ಮುರಾರಿಯು ಎನಗೆ
ಪ್ರಸನ್ನ ಘೋರ ದುರಿತದ ಬನ್ನ ಭಯ ಹಾರಿ|
ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ
ಚರಣ ಸೇವಕರಿಗೆ ಕ್ರೂರ ಯಮನು ಶರಣಾಗತನಲ್ಲವೆ || 1 ||

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಕಪಟದಿಂದ |
ಇರಲು ಆ ಕ್ಷಣದಿಂದ ಹರಿ ಕೃಪೆಯವರಲ್ಲಿದ್ದ
ಕಾರಣ ಬಂದ ದುರಿತ ಭಯವು ಬಯಲಾಯಿತಲ್ಲವೆ || 2||

ಸಿಂಗನ ಪೆಗಲೇರಿ ಸಾಗೆ ಕರಿಭಂಗವೇಕೆ ಮತ್ತವಗೆ
ರಂಗನ ದಯವುಳ್ಳವಗೆ ಭವ ಭಂಗದ ಬಯಕೆಯ ಹಂಗೇ |
ಮಂಗಳ ಮಹಿಮ ಶ್ರೀ ಪುರಂದರ ವಿಟ್ಠಲನ
ಹಿಂಗದ ದಯವೊಂದಿದ್ದರೇ ಸಾಲದೇ || 3 ||

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ||

ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ ||

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧||

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ
ಅರಳೆಲೆ ಕನಕ ಕುಂಡಲ ಕಾಲಲನುಗೆ ಉರಗ ಶಯನ ಬಂದ ಕಂಡಿರೇನೆ ||೨||

ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿ ಶಂಖ ಚಕ್ರಗಳ ಧರಿಸಿಹನಮ್ಮ
ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷನು ಬಂದ ಕಾಣಿರೇನೆ ||೩||

ಮಾವನ ಮಡುಹಿದ ಶಕಟನ ಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮ
ಆವ ತಾಯಿಗೆ ಈರೇಳು ಜಗ ತೋರಿದ ಕಾವನಯ್ಯ ಬಂದ ಕಾಣಿರೇನೆ ||೪||

ಕಾಲಲಿ ಕಿರು ಗೆಜ್ಜೆ ನೀಲದ ಬಾವುಲಿ ನೀಲ ವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನ್ನು ತೋರಿದ ಮೂಲೋಕದೊಡೆಯನ ಕಂಡಿರೇನೆ ||೫||

ಹದಿನಾರು ಸಾವಿರ ಗೋಪಿಯರ ಕೂಡಿ ಚತುರಂಗ ಪಗಡೆಯನಾಡುವನಮ್ಮ
ಮದನ ಮೋಹನ ರೂಪ ಎದೆಯಲ್ಲಿ ಕೌಸ್ತುಭ ಮಧುಸೂದನ ಬಂದ ಕಾಣಿರೇನೆ ||೬||

ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ ಹತ್ತಾವತಾರವನೆತ್ತಿದನಮ್ಮ
ಸತ್ಯಭಾಮಾ ಪ್ರಿಯ ಪುರಂದರ ವಿಟ್ಠಲ ನಿತ್ಯೋತ್ಸವ ಬಂದ ಕಾಣಿರೇನೆ ||೭||