• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ನೀನೇ ದೊಡ್ಡವನೋ

ಪಲ್ಲವಿ:

ನೀನೇ ದೊಡ್ಡವನೋ ನಿನ್ನ ದಾಸರು ದೊಡ್ಡವರೋ ಹರಿಯೇ ?*

ಅನುಪಲ್ಲವಿ:

ನಾನಾ ತೆರದಿ ನಿದಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ

ಚರಣ:

ತರಳನು ಕರೆಯಲು ಭರದಿ ಕಂಬದಿ ಬಂದು ನರಮೃಗರೂಪದಿಂದ ಅವನ ಕಾಯ್ದೆ
ವರಗಳೀವ ಪುರಂದರ ವಿಠಲನೆ ಸ್ಮರಿಪರ ಮನದಲ್ಲಿ ಸೆರೆಸಿಕ್ಕಿದ ಮೇಲೆ

* ನೀನೇ ಬಲ್ಲಿದನೋ ನಿನ್ನ ದಾಸರು ಬಲ್ಲಿದರೋ ಎಂಬ ಪಾಠವೂ ಇದೆ

Advertisements

ಜಗನ್ಮೋಹನನೆ ಕೃಷ್ಣ

ಪಲ್ಲವಿ:

ಜಗನ್ಮೋಹನನೇ ಕೃಷ್ಣ

ಅನುಪಲ್ಲವಿ:

ಜಗವಂ ಪಾಲಿಪನೆ ಕೃಷ್ಣ

ಚರಣಗಳು:

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದ ಬಲಿ ಶಿರದಲೆ ಇಟ್ಟೆ
ಇಂಥಾ ವಿದ್ಯವನೆಲ್ಲಿ ಕಲಿತೆಯೊ ರಂಗ?

ಲೋಕದೊಳಗೆ ಶಿಶುವಾಗಿ ಮೂರ್-
ಲೋಕವನೆಲ್ಲ ಬಾಯಲ್ಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲ ಎಲ್ಲಿ ಕಲಿತೆಯೊ ರಂಗ?

ಎಂದೆಂದಿಗು ನಿಮ್ಮ ಗುಣಗಳನ್ನು ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರ ವಿಟ್ಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ?

ಧಣಿಯ ನೋಡಿದೆನಾ ವೆಂಕಟನ

ಧಣಿಯ ನೋಡಿದೆನಾ ವೆಂಕಟನ ಮನ-
ದಣಿಯೇ ನೋಡಿದೆನಾ! ||ಪಲ್ಲವಿ||

ಧಣಿಯ ನೋಡಿದೆ ಶಿಖಾಮಣಿ ತಿರುಮಲನಾ! ||ಅನುಪಲ್ಲವಿ||

ಕೇಸಕ್ಕಿ ಅನ್ನ ಉಂಬುವನಾ ಬಡ್ಡಿ
ಕಾಸು ಬಿಡದೇ ಹೊನ್ನ ಗಳಿಸುವನಾ!
ದೋಸೆ ಅನ್ನವ ಮಾರಿಸುವನಾ ತನ್ನ
ದಾಸರ ಮ್ಯಾಳದಿ ಕುಣಿದಾಡುತಿಹನಾ! ||೧||

ಬೆಟ್ಟದೊಳಗೆ ಇರುತಿಹನ ಮನ
ಮುಟ್ಟಿ ಭಜಿಪರಿಗಿಷ್ಟವ ಸಲ್ಲಿಸುವನಾ!
ಕೊಟ್ಟ ವರವ ತಪ್ಪದವನ
ಸೃಷ್ಟಿಗಧಿಕ ಶ್ರೀ ಪುರಂದರ ವಿಠಲನ! ||೨||

ಹರಿ ಸ್ಮರಣೆ ಮಾಡೋ ನಿರಂತರ

ಪಲ್ಲವಿ
ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ

ಚರಣ

1. ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ

2. ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ

3. ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ

4. ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ

5. ಶ್ರೀಶ ಪುರಂದರ ವಿಟ್ಠಲ ರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ

ಕೇಳಲೊಲ್ಲನೆ ಎನ್ನ ಮಾತನು

ಪಲ್ಲವಿ:
ಕೇಳಲೊಲ್ಲನೆ ಎನ್ನ ಮಾತನು ರಂಗ ಕಾಳಿಯಮರ್ದನ ಕೃಷ್ಣಗೆ ಪೇಳೆ ಗೋಪ್ಯಮ್ಮ ಬುದ್ಧಿ

ಚರಣ :

1: ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ

2: ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ

3: ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಟ್ಠಲ

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?

ಪಲ್ಲವಿ :
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ

ಅನುಪಲ್ಲವಿ:ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು

ಚರಣ:

1: ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆಮಂದೆಯಲಿ

2: ಶ್ರೀ ಗುರೂಕ್ತ ಸದಾ ಸುಮಂಗಳ ಯೋಗ ಯೋಗದಲಿ
ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಾಡುವ ರಾಗ ರಾಗದಲಿ

3: ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರ ವಿಟ್ಠಲನ ಲೋಚನಾಗ್ರದಲಿ

ರಂಗನ ನೋಡಿರೆ

ರಂಗನ ನೋಡಿರೆ ರಾಜಕುವರ ನರ
ಸಿಂಗ ದೇವ ನಮ್ಮ ದೇವಕಿ ಸುತನ || ಪಲ್ಲವಿ||

ಹಮ್ಮಿನ ತಾಯಿತ ತೋಳ ಭಾಪುರಿಯೊ
ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ
ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ
ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ ||1||

ಶುಕ್ರವಾರದ ಪೂಜೆಗೊಂಬವನ
ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ
ಘಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸ ಕುಲವೈರಿ ರಾವಣಾಂತಕನ ||2||

ಪಾಪವಿನಾಶಿನಿ ಸ್ನಾನವ ಮಾಡಿ
ಪಾಪಗಳೆಲ್ಲವು ಬೇಗಬಿಟ್ಟೋಡಿ
ಈ ಪರಿ ದಿನ ದಿನ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ ||3||