• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ನರನಾದ ಮೇಲೆ

ಪಲ್ಲವಿ:

ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ||

ಚರಣಗಳು:


ಭೂತ ದಯಾಪರನಾಗಿರ ಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು ಮಾತಿಗೆ ಹರಿಯೆನ್ನ ಬೇಕು ||1||

ಆರು ವರ್ಗವನಾಳಿಯಲು ಬೇಕು |
ಮೂರು ಗುಣಂಗಳ ಮೀರಲು ಬೇಕು |
ಸೇರಿ ಬ್ರಹ್ಮನೊಳು ಸುಖಿಸಲು ಬೇಕು ||2||

ಅಷ್ಟ ಮದಂಗಳ ತುಳಿಯಲು ಬೇಕು |
ದುಷ್ಟರ ಸಂಗವ ಬಿಡಲು ಬೇಕು |
ಕೃಷ್ಣ ಕೇಶವ ಎನ್ನಬೇಕು ||3||

ವೇದ ಶಾಸ್ತ್ರವನೋದಲು ಬೇಕು |
ಭೇದಹಂಕಾರವ ನೀಗಲು ಬೇಕು |
ಮಾಧವ ಸ್ಮರಣೆಯೊಳಿರಬೇಕು ||4||

ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು |
ಭ್ರಾಂತಿ ಕ್ರೋಧವ ಕಳೆಯಲು ಬೇಕು |
ಸಂತರ ಸಂಗದಿ ರತಿಯಿರಬೇಕು ||5||

ಗುರುವಿನ ಚರಣಕ್ಕೆರಗಲುಬೇಕು |
ತರುಣೋಪಾಯವನರಿಯಲುಬೇಕು |
ವಿರಕ್ತಿ ಮಾರ್ಗದಲಿರಬೇಕು ||6||

ಬಂದದ್ದುಂಡು ಸುಖಿಸಲುಬೇಕು |
ನಿಂದಾ ಸ್ತುತಿಗಳ ತಾಳಲುಬೇಕು |
ತಂದೆ ಪುರಂದರ ವಿಟ್ಟಲನೆನಬೇಕು ||7||

Advertisements

ಕ್ರಿಮಿ ಕೀಟನಾಗಿ ಹುಟ್ಟಿದಂದು

ಕ್ರಿಮಿ ಕೀಟನಾಗಿ ಹುಟ್ಟಿದಂದು ಹರಿ ಶರಣೆಂತೆನಲುಂಟೆ |
ಹರಿ ಹರಿಣನಾಗಿ  ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಹಂದಿ ಶುನಕನಾಗಿ ಹುಟ್ಟಿದಂದು ಹರಿ ಶರಣೆಂದೆನಲುಂಟೆ |
ಮರತೀಯೆ ಮನವೆ ನಿನ್ನ ಹಿಂದಿನ ಭವಗಳ ನೊಂದು |
ಮಾನುಷ ದೇಹ ಬಂದಿತೊ ನಿನಗೀಗ |
ಬೇಗ ನೆನೆಯೆಲೊ ಪುರಂದರವಿಠಲರಾಯನ ||

ಇವನ ಹಿಡಕೊಂಡು ಹೋಗೆಲೋ ಜೋಗಿ

ಇವನ ಪಿಡಿದುಕೊಂಡು ಹೋಗೆಲೋ ಜೋಗಿ
ಇವ ನಮ್ಮ ಮಾತು ಕೇಳದೆ ಪುಂಡನಾದ ||ಪ||

ಆಡುತಾಡುತ ಹೋಗಿ ನೀರಲ್ಲಿ ಮುಳುಗಿದ |
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಪೊತ್ತ |
ದಾಡೆಯ ಮೇಲೆ ತಾ ಧಾರುಣಿ ನೆಗಹಿದ |
ನೋಡಿದವರಿಗೆ ಬಾಯ್ ತೆರೆದಂಜಿಸಿದ ||೧||

ಹುಲ್ಲಲ್ಲಿ ವಿಪ್ರನ ಕಣ್ಣು ತಿವಿದ ಬುದ್ಧಿ |
ಅಲ್ಲವೆಂದರೆ ಕೈಲಿ ಕೊಡಲಿಯ ಪಿಡಿದಾ |
ಬಿಲ್ಲು ಪಿಡಿದು ಬಲು ರಕ್ಕಸರ ಸವರಿದ |
ಬಲ್ಲಿದ ಮಾವನ ಶಿರವ ಛೇದಿಸಿದ ||೨||

ಬೆತ್ತಲೆ ಕುದುರೆಯ ಹತ್ತಬೇಡೆಂದರೆ |
ಹತ್ತಿದನು ಈತ ಛಂದದಿಂದ |
ಭಕ್ತವತ್ಸಲ ನಮ್ಮ ಪುರಂದರ ವಿಠಲನ |
ಎತ್ತಲಾದರೂ ಕೊಂಡು ಹೋಗೆಲೋ ಜೋಗಿ ||೩ ||

ಕಂಡೆ ನಾ ಕನಸಿನಲಿ ಗೋವಿಂದನ

ಕಂಡೆ ನಾ ಕನಸಿನಲಿ ಗೋವಿಂದನ
ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ –
-ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮ ಗೋಚರನ

ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ
ಕರದಲಿ ಕಂಕಣ ನಲಿದೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರತದಿ ಒಪ್ಪುವ ಕರುಣಾಮೂರುತಿಯ

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟವ
ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ

ಮಂಗಳ ವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ

ಪೋಗದಿರೆಲೋ ರಂಗ

ಪಲ್ಲವಿ:

ಪೋಗದಿರೆಲೋ ರಂಗ ಬಾಗಿಲಿಂದಾಚೆಗೆ

ಅನುಪಲ್ಲವಿ:

ಭಾಗವತರು ಕಂಡರೆ ಎತ್ತಿಕೊಂಡೊಯ್ವರೋ

ಚರಣ:

1. ಸುರ ಮುನಿಗಳು ತಮ್ಮ ಹೃದಯ ಗಹ್ವರದಲ್ಲಿ ಪರಮಾತ್ಮನ ಕಾಣದೆ ಅರಸುವರೊ
ದೊರಕದ ವಸ್ತುವಿಂದು ದೊರಕಿತು ತಮಗೆಂದು ಹರುಷದಿಂದಲಿ ನಿನ್ನ ಕರದೆತ್ತಿಕೊಂಬರು

2: ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ

3: ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರ ವಿಟ್ಠಲರಾಯನೆ ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ