ಆನೆಯು ಕರೆದರೆ

ಆನೆಯು ಕರೆದರೆ ಆದಿಮೂಲ ಬಂದಂತೆ
ಅಜಾಮಿಳನು ಕರೆದರೆ ನಾರಾಯಣನು ಬಂದಂತೆ
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ
ನಿನ್ನ ದಾಸರ ದಾಸನು ನಾ ಕರೆದರೆ
ಎನ್ನ ಪಾಲಿಸಬೇಕು ಪುರಂದರ ವಿಠಲ

Advertisements

ಇನ್ನೂ ದಯಬಾರದೆ ?

ಪಲ್ಲವಿ: 

ಇನ್ನೂ ದಯಬಾರದೆ ದಾಸನ ಮೇಲೆ ?

ಅನುಪಲ್ಲವಿ:
ಪನ್ನಗಶಯನ ಪರಮಪುರುಷ ಹರಿಯೇ!

ಚರಣಗಳು:

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ ಪಾಮರನಾಗಿಹ ಪಾತಕಿಯು
ಮಾ ಮನೋಹರನೆ ಚಿತ್ತಜ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ

ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಾಧೀನವಲ್ಲೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ

ಓಡಿ ಬಾರಯ್ಯ

ಪಲ್ಲವಿ:

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೆ

ಅನುಪಲ್ಲವಿ:

ಕಾಡಬೇಡವೋ ಕರುಣಾಕರ ನಿನ್ನ ಬೇಡಿಕೊಂಬೆನೊ ರಂಗಯ್ಯ ಬೇಗ

ಚರಣ:

1. ಕೆಂದಾವರೆ ಪೋಲ್ವ ಪಾದಗಳಿಂದ ರಂಗ ಧಿಂ ಧಿಮಿ ಧಿಮಿಕೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ ಅರವಿಂದ ನಯನ ಗೋವಿಂದ ನೀ ಬಾರೋ

2: ಎಣ್ಣೋರಿಗತಿರಸ ದಧಿ ಘೃತವೋ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೋ
ಚಿಣ್ಣರ ಒಡನಾಟ ಸಾಕೋ ಬಿಡೋ ಈಗ ಬೆಣ್ಣೆಯ ಮೆಲುವುದು ಬೇಡವೋ ಕಂದ

3: ತುರುಬಿನ ಮೇಲೆ ನಲಿಯುತಲಿರುತಿಹ ಚೆಲ್ವ ಮರುಗಮಲ್ಲಿಗೆ ಜಾಜಿ ತುಲಸಿಯ ದಂಡೆ
ಕರದಲ್ಲಿ ಪಿಡಿದಿಹ ಮುತ್ತಿನ ಚೆಂಡು ಬಲು ಸರಸದಿಂದಲಿ ನೀ ನಲಿದಾಡುತ ಬಾರೋ

4: ಕೋಟಿ ಸೂರ್ಯ ಪ್ರಕಾಶದಂತೆ ಕಿರೀಟ ಕುಂಡಲ ಬಾವುಲಿ ಹೊಳೆವ ಲಲಾಟ
ಕಸ್ತೂರಿ ತಿಲಕ ಇಡುವ ರಂಗ ಕೂಟ ಗೋಪಾಲರ ಆಟ ಸಾಕೋ ಈಗ

5: ಮಂಗಳಾತ್ಮಕ ಮೋಹನಕಾಯ ರಂಗ ಸಂಗೀತಲೋಲ ಸದ್ಗುಣ ಶೀಲ
ಅಂಗನೆಯರಿಗೆಲ್ಲ ಅತಿ ಪ್ರಿಯನಾದ ಶುಭ ಮಂಗಳ ಮೂರುತಿ ಪುರಂದರ ವಿಠಲ

ಕಾಳಿಯ ಮರ್ದನ ರಂಗಗೆ

ಪಲ್ಲವಿ: 

ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು
ಚರಣ: 

ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ

ಮೂರಡಿ ಭೂಮಿಯ ಬೇಡಿದನೆ ನೃಪರ ಬೇರನಳಿಯ ಕೊಡಲಿ ಪಿಡಿದನೆ
ನಾರಮಡಿಯನಿಟ್ಟು ಬಂದನೆ ಅಹ ಚೋರತನದಿ ಪಾಲ್ ಬೆಣ್ಣೆಯ ತಿಂದನೆ

ಬತ್ತಲೆ ನಾರಿಯರನಪ್ಪಿದ ಹೋಗಿ ಉತ್ತಮಾಶ್ವವವನು ಹತ್ತಿದ
ಹತ್ತವತಾರ ತಾಳಿದ ನಮ್ಮ ಭಕ್ತವತ್ಸಲ ಸ್ವಾಮಿ ಪುರಂದರ ವಿಠಲನು

ಬೇನೆ ತಾಳಲಾರೆ ಬಾ ಎನ್ನ ಗಂಡ

ಪಲ್ಲವಿ:
ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು

ಚರಣಗಳು:

ಬೇಳೆ ಬೆಲ್ಲವ ತಂದು ಹೋಳಿಗೆಯನು ಮಾಡಿ ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ
ಹಾಲು ಸಕ್ಕರೆ ಹದ ಮಾಡಿ ತಂದಿಡು ಎರಕದ ಗಿಂಡಿಲಿ ನೀರ ತಾರೊ ಗಂಡ

ಗಸಗಸೆ ಲಡ್ಡಿಗೆ ಹಸನಾದ ಕೆನೆ ಹಾಲು ಬಿಸಿಯ ಹುರಿಗಡಲೆ ಬಿಳಿಯ ಬೆಲ್ಲ
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷ ವಿಷವೆಂದು ನಾ ತಿಂಬೆನೊ

ಹಪ್ಪಳ ಕರಿದಿಡು ಸಂಡಿಗೆ ಹುರಿದಿಡು ತುಪ್ಪದಿ ನಾಲ್ಕು ಚಕ್ಕುಲಿ ಕರಿದು
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು ಬಚ್ಚಲಿಗೆ ಬರುತೇನೆ ನೀರ ಹದಮಾಡೊ

ಎಣ್ಣೆ ಬದನೆಕಾಯಿ ಬೆಣ್ಣೆ ಸಜ್ಜಿಯ ರೊಟ್ಟಿ ಸಣ್ಣಕ್ಕಿಬೋನ ಬದಿಯಲಿಟ್ಟು
ಸಣ್ಣ ತುಂಚಿಯ ಲಿಂಬೆ ಲಲಮಾಗಡಿಬೇರು ಉಣ್ಣುಣ್ಣು ಎಂದರೆ ಉಂಬೆನೊ ಗಂಡ

ಗಂಧ ಕುಂಕುಮವನು ಬದಿಯಲಿ ತಂದಿಡು ಮಡಿಯಲಿ ತಂಬಿಗೆ ನೀರ ತಾರೋ
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ
ಸ್ನಾನ ಮಾಡಿಕೊಂಡು ಸೀರೆಯ ತೆಕ್ಕೊಟ್ಟು ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ

ಸಣ್ಣ ನುಚ್ಚು ಇಟ್ಟುಕೊ ಗೊಡ್‍ಹುಳಿ ಕಾಸಿಕೊ ದೊನ್ನೆಯೊಳಗೆ ತುಪ್ಪ ಬಡಿಸಿಕೊ
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಟ್ಟಲನ ನೆನೆವುತ ನೀನೊಂದು ಮೂಲೆಲಿ ಬಿದ್ದುಕೊಳ್ಳೋ ಗಂಡ

ಶಿವ ದರುಶನ ನಮಗಾಯಿತು

ಶಿವ ದರುಶನ ನಮಗಾಯಿತು ಕೇಳೆ
ಶಿವರಾತ್ರಿಯ ಜಾಗರಣೆ ||

ಪಾತಾಳ ಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು ||

ಬೇಡಿವ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು ||

ಶಿಖರವ ಕಂಡೆನು ಪುರಂದರವಿಠಲನ
ಹರಿನಾರಾಯಣ ಧ್ಯಾನದಲೆ ||

ಕೇಳನೋ ಹರಿ ತಾಳನೋ

ಪಲ್ಲವಿ:

ಕೇಳನೋ ಹರಿ ತಾಳನೊ

ಅನುಪಲ್ಲವಿ:

ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ

ಚರಣ:

1: ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗಾಟ

2: ನಾನಾ ಬಗೆಯ ರಾಗ ಭಾವ ತಿಳಿದು ಸ್ವರ ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯ ನಾಮ ರಹಿತವಾದ ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

3: ಅಡಿಗಡಿಗಾನಂದ ಬಾಷ್ಪ ಪುಳಕದಿಂದ ನಡೆ ನುಡಿಗೆ ಶ್ರೀ ಹರಿಯೆನ್ನುತ
ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ ಕಡೆಗೆ ಪುರಂದರ ವಿಠಲನೆಂದರೆ ಕೇಳ್ವ