• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಪೊಂಗೊಳಲೂದುತಿಹ

ಪಲ್ಲವಿ:

ಪೊಂಗೊಳಲೂದುತಿಹ ಯದುಕುಲೋತ್ತುಂಗ

ಅನುಪಲ್ಲವಿ:

ತಿಂಗಳಪಾಂಗನೆ ರಜತ ಶುಭಾಂಗ

ಚರಣ:

1:

ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ

ಬಲಿಯ ಬೇಡಿದನು ಭೃಗು ಕುಲದಿ ಜನಿಸಿ

ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ

ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 

2:

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ

ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ

ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ

 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 

3:

ವಾರಿಚರ ಕೂರ್ಮಾವತಾರ ಸೂಕರ ಕ್ರೂರ

ಧರಣಿಯನೆಳೆದು ಶೂರರನು ಗೆಲಿದು

ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು

ಏರಿದನು ಹಯವ ಪುರಂದರ ವಿಠಲ ಜಗದೊಡೆಯ

Advertisements

ಅಂಗಿ ತೊಟ್ಟೇನೆ

ಪಲ್ಲವಿ
ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ

ಚರಣ:

1:
ಚಕ್ಕುಲಿ ಕೊಡು ಎನಗೆ ಗೋಪಿ
ಅಕ್ಕರದಿ ಬಂದೆನೆ ಗೊಲ್ಲರ
ಮಕ್ಕಳ ಎಲ್ಲರೊಡ ಗೂಡಿ ಹಲವು
ಗೋವ್ಗಳ ಕಾಯ್ದು ಬಂದೆನೆ

2:
ಅಮ್ಮಣ್ಣಿ ಕೊಡು ಎನಗೆ ಗೋಪಿ
ಬೆಣ್ಣೆಯ ತೋರೆ ಮೇಲೆ
ಗಮ್ಮನೆ ತಟಕನೆ ಮೊಸರನೆ ಸವಿದು
ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು

3:

ಅಪ್ಪಚ್ಚಿ ಕೊಡು ಎನಗೆ ಗೋಪಿ
ತುಪ್ಪವ ಕೊಡೆ ಮೇಲೆ
ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ
ಉಪ್ಪು ಕಡಲೆಯನ್ನು ಚೀಲದಿ ತುಂಬುವೆ

4:

ಚೆಂಡು ಕೊಡು ಎನಗೆ ಗೋಪಿ
ಚಿನಿಕೋಲು ಬೇಕಲ್ಲ
ಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ
ಹಿಂಡು ಗೋವುಗಳ ಕಾಯ್ದು ಬಂದೆನೆ

5:

ಈ ಲೀಲೆಗಳ ಕೇಳಿ ಗೋಪಿ
ತೋಳಿನೊಳ್ ಬಿಗಿದಪ್ಪಿ
ಶ್ರೀಲೋಲ ಪುರಂದರ ವಿಟ್ಠಲನ
ಲೀಲೆಯಿಂದಲಿ ಬಾರೆನುತ

ಮಕುಟಕ್ಕೆ ಮಂಗಳ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಗಗೆ

ವಕ್ಷಕ್ಕೆ ಮಂಗಳ ವಟು ವಾಮನನಿಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ ರಾಮಗೆ
ಕುಕ್ಷಿಗೆ ಮಂಗಳ ಕೃಷ್ಣರಾಯಗೆ

ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಕಲ್ಕಿಗೇ
ಪರಿಪರಿ ಮಂಗಳ ಪರಮಾತ್ಮಗೆ
ಪುರಂದರ ವಿಟ್ಠಲಗೆ ಜಯಮಂಗಳ

ಶ್ರೀನಿವಾಸ ನೀನೇ ಪಾಲಿಸೋ

ಪಲ್ಲವಿ:

ಶ್ರೀನಿವಾಸ ನೀನೇ ಪಾಲಿಸೋ ಶೃತಜನ ಪಾಲ
ಗಾನಲೋಲ ಶ್ರೀ ಮುಕುಂದನೇ

ಅನುಪಲ್ಲವಿ:

ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ

ಚರಣ:

1:

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಾನು (?)
ನಿಂದು ತತ್ತರಿಸುತಿಹೆನೊ ಮುಕುಂದ

2:

ಎಷ್ಟು ದಿನ ಕಷ್ಟ ಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕಯ್ಯ ಪಿಡಿದು

3:

ಅನುದಿನ ಅನೇಕ ರೋಗಂಗಳ ಅನುಭವಿಸುವೆನು
ಘನ ಮಹಿಮನೆ ಕೇಳಯ್ಯ ತನುವಿನಲ್ಲಿ ಬಲವಿಲ್ಲ
ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಟ್ಠಲನೇ ಕಯ್ಯ ಪಿಡಿದು

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ?
ಏನು ನೋಡಿದರೇನು ಏನು ಮಾಡಿದರೇನು
ಮನದೊಳಗಿನ ತಾಮಸ ಮಾಣದನ್ನಕ್ಕ
ಕೊಳಲ ದನಿಗೆ ಸರ್ಪ ತಲೆದೂಗುವಂದದಿ
ಇದಕೇನು ಮದ್ದು ಪುರಂದರ ವಿಠಲ? 

ಪಂಕಜ ಮುಖಿಯರೆಲ್ಲರು ಬಂದು

ಪಲ್ಲವಿ:

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ

ಚರಣ:

1:

ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ
ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ

2:

ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೊಡಲಿಯ ಪಿಡಿದವಗೆ
ರಾಮಚಂದ್ರನಾಗಿ ದಶ ಶಿರನನು ಕೊಂದ ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ

3:

ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ
ಭಕ್ತರ ಸಲಹುವ ಪುರಂದರ ವಿಟ್ಠಲಗೆ ಮುತ್ತೈದೆಯರಾರತಿ ಎತ್ತಿರೆ

ಇವಗೇಕೆ ಶೃಂಗಾರ

ಪಲ್ಲವಿ:
ಇವಗೇಕೆ ಶೃಂಗಾರ ಇವಗೇಕೆ ಬಂಗಾರ?
ಅನುಪಲ್ಲವಿ:
ಕಾಡ ಕರಡಿಯಂತೆ ಪೋಲುವ ದೇಹಕ್ಕೆ
ಚರಣ ೧:
ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ?
ಕೋರೆ ದಾಡೆಯ ಘೋರ ಮುಖಗೇಕೆ ಕನ್ನಡಿ ಕರುಳ ಹಾರ ಧರಿಸಿದವಕೆ ಹಾರ ಪದಕವೇಕೆ?
ಚರಣ ೨:
ನೆಲವನಳೆದವಗೆ ಕಾಲ ಕಿರುಗೆಜ್ಜೆ ಏಕೆ ತಲೆ ತಾಯ ತರಿದವಗೆ ಮರಿಯಾದೆಯೇಕೆ?
ಚೇಲಾರಿವೆಯ ಉಟ್ಟವಗೇಕೆ ಪೀತಾಂಬರ ಪಾಲ ಕದ್ದು ಕುಡಿದವಗೆ ಕುಸುಮ ಕೇಸರಿಯೇಕೆ?
ಚರಣ ೩:
ಬತ್ತಲೆ ನಿಂತಿದ್ದವಗೆ ಕಸ್ತೂರಿ ತಿಲಕವೇಕೆ ಉತ್ತಮ ಹಯವನೇರಿದವಕೆ ಪುಷ್ಪಕವೇಕೆ?
ಚಿತ್ತಜನಯ್ಯ ಶ್ರೀ ಪುರಂದರ ವಿಟ್ಠಲ ಭಕ್ತರ ಸಲಹುವಗೆ ಬಹಿರಂಗದಾಭರಣವೇಕೆ?