• ದಾಸರ ದರ್ಶನ ಮಾಡಿದ ಕಂಗಳು!

  • ಪದಗಳು- ಮೊದಲ ಅಕ್ಷರದಿಂದ ಇಲ್ಲಿ ಹುಡುಕಿ

  • Top Posts

  • Advertisements

ಪುರಂದರ ದರ್ಶನ, ಇನ್ನು ಹರಿದಾಸ ಸಂಪದದಲ್ಲಿ

ನಮಸ್ಕಾರ

ನೀವು ಪುರಂದರ ದಾಸರ ರಚನೆಯೊಂದನ್ನು ಹುಡುಕುತ್ತಾ ಇಲ್ಲಿಗೆ ಬಂದಿರಬಹುದು.ಇದೇನು, ಹಲವು ದಿನಗಳಿಂದ ಇಲ್ಲಿ ಯಾವ ರಚನೆಯೂ ಹೊಸದಾಗಿ ಬಂದಿಲ್ಲವೆಂದುಕೊಂಡಿರಬಹುದು. ಅದಕ್ಕೆ ಕಾರಣವೂ ಇದೆ.

ಕೆಲವು ತಿಂಗಳ ಹಿಂದೆ ಅಂತರ್ಜಾಲದಲ್ಲಿ ದಾಸ ಸಾಹಿತ್ಯಕ್ಕೆಂದೇ ಮೀಸಲಾದ ಹರಿದಾಸ ಸಂಪದ ಆರಂಭವಾಗಿದೆ. ಹಾಗಾಗಿ, ನಾನು ಪುರಂದರ ದಾಸರ ರಚನೆಗಳನ್ನು ಹಾಕುವ ಬದಲು ಹರಿದಾಸ ಸಂಪದದಲ್ಲಿ ಹಾಕತೊಡಗಿರುವೆ. ಅಷ್ಟೇ ಅಲ್ಲದೆ, ಇತರ ದಾಸರ ರಚನೆಗಳೂ, ದಾಸರ ಬಗ್ಗೆ ಬರಹಗಳೂ ಅಲ್ಲಿ ನಿಮಗೆ ಸಿಗುತ್ತವೆ.

ನಿಮಗೆ ಯಾವುದಾದರೂ ದೇವರನಾಮ/ಉಗಾಭೋಗ/ಸುಳಾದಿಯ ಸಾಹಿತ್ಯ ಬೇಕಿದ್ದರೆ ನೀವು ಈ ಬ್ಲಾಗ್ ನಲ್ಲಿ ಟಿಪ್ಪಣಿ ಹಾಕುವುದನ್ನು  ಮುಂದುವರಿಸಬಹುದು. ಆ ರಚನೆಗಳನ್ನು ಹರಿದಾಸ ಸಂಪದದಲ್ಲಿ ಹಾಕುವೆ. ಮತ್ತೆ ನಿಮಗೆ ದಾಸ ಸಾಹಿತ್ಯದಲ್ಲಿ ಆಸಕ್ತಿಯಿದ್ದು ಬರಹಗಳನ್ನು ಬರೆಯಲು, ಅಥವಾ ರಚನೆಗಳನ್ನು ಬೆರಳಚ್ಚಿಸಿ ಹರಿದಾಸ ಸಂಪದಕ್ಕೆ ಹಾಕುವ ಕೆಲಸದಲ್ಲಿ ಆಸಕ್ತಿ ಇದ್ದರೆ ಒಂದು ಟಿಪ್ಪಣಿ ಹಾಕಿ ನನ್ನನ್ನು ಸಂಪರ್ಕಿಸಿ.

ಕನ್ನಡಿಗರಿಗೆ ಅಂತರ್ಜಾಲದಲ್ಲಿ ಸುಪರಿಚಿತ ಸಂಪದ.ನೆಟ್ ನ ಕೊಡುಗೆಯಾದ  ಹರಿದಾಸ ಸಂಪದ ಕ್ಕೆ ಹೋಗಲು ಇಲ್ಲಿ ಚಿಟಕಿಸಿ.

-ನೀಲಾಂಜನ.

Advertisements

ಧರಣಿಗೆ ದೊರೆಯೆಂದು ನಂಬಿದೆ

ಪಲ್ಲವಿ:

ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ

ಚರಣಗಳು:
ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ

ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡುಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರು ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜ ಜನಕ ಶ್ರೀ ಪುರಂದರ ವಿಟ್ಠಲ

ದೇವ ಬಂದ ನಮ್ಮ

ಪಲ್ಲವಿ

ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ

ಚರಣಗಳು:

ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ

ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ

ಪಕ್ಷಿವಾಹನ ಬಂದ ಲಕ್ಷ್ಮಿ ರಮಣ ಬಂದ
ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದ

ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದನೋ

ದಾಸನ ಮಾಡಿಕೊ ಎನ್ನ

ಪಲ್ಲವಿ:
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ಚರಣ:
ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವನೆನ್ನ ಶಿರದಲ್ಲಿ ಮುಡಿಸೊ ||೧||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೊಡಿಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||

ಮೊರೆಹೊಕ್ಕವರ ಕಾವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು ||೩||

ಡಂಗುರವ ಸಾರಿರಯ್ಯ

ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು | ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಪ ||

ಹರಿಯು ಮುಡಿದ ಹೂವು ಹರಿವಾಣದೊಳಗೆ ಇಟ್ಟುಕೊಂಡು ||
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ || ೧ ||

ಒಡಲು ಜಾಗಟೆಯ ಮಾಡಿ ನುಡಿವ ನಾಲಿಗೆ ಘಂಟೆ ಮಾಡಿ ||
ಬಿಡದೆ ಢಣಢಣಢಣರೆಂದು ಹೊಡೆದು ಚಪ್ಪಾಳಿಕ್ಕುತ || ೨ ||

ಇಂತು ಲೋಕಕ್ಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು ||
ಸಂತತ ಶ್ರೀಪುರಂದರವಿಠಲನೇ ಪರದೈವವೆಂದು || ೩ ||

ಬುತ್ತಿಯ ಕಟ್ಟೋ ಮನುಜ

ಪಲ್ಲವಿ:

ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ

ಅನುಪಲ್ಲವಿ:

ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು

ಚರಣಗಳು:

1.
ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನವಾಗಿ

2:
ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು
ಪರಮ ವೈರಾಗ್ಯದಿಂದಲೆ ಶ್ರೀ ಹರಿಗೆ ಅರ್ಪಿತವೆಂದು

3:
ಕರ್ತು ಪುರಂದರ ವಿಟ್ಟಲ ತತ್ವವೆಂಬ ಬುತ್ತಿಯನು
ಹತ್ತಿರ ತಂದಿಟ್ಟು ಕೊಂಡು ನಿತ್ಯ ಉಂಡು ತೃಪ್ತಿ ಪಡಿರೊ

ಇದೇ ಸಮಯ ರಂಗ

ಪಲ್ಲವಿ:

ಇದೇ ಸಮಯ ರಂಗ ಬಾರೆಲೊ ಇದೇ ಸಮಯ ಕೃಷ್ಣ ಬಾರೆಲೊ

ಚರಣಗಳು:

1: ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳೇಳಳೋ
ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರುವಳೋ

2: ಮಾವ ಎನ್ನಲಿ ಅವಿಶ್ವಾಸಿಯೋ ಮದುವೆಯಾದ ಗಂಡ ಉದಾಸಿಯೋ
ಭಾವನು ಎನ್ನ ಸೇರ ಹೇಸಿಯೋ ನೀನೀ ವೇಳೆಗೆ ಬಂದರೆ ವಾಸಿಯೋ

3: ತಂದೆ ತಾಯಿ ಆಸೆ ಮಾಡೆನೊ ಎನ್ನ ಕಂದನ ಮೇಲೆ ಮನಸಿಡೆನೊ
ಮಂದರಧರ ಪುರಂದರ ವಿಟ್ಠಲ ನೀ ಬಂದರೆ ಚರಣ ಸೇವೆ ಮಾಳ್ಪೆನೋ