Posted on October 16, 2008 by neelanjana
ನಮಸ್ಕಾರ
ನೀವು ಪುರಂದರ ದಾಸರ ರಚನೆಯೊಂದನ್ನು ಹುಡುಕುತ್ತಾ ಇಲ್ಲಿಗೆ ಬಂದಿರಬಹುದು.ಇದೇನು, ಹಲವು ದಿನಗಳಿಂದ ಇಲ್ಲಿ ಯಾವ ರಚನೆಯೂ ಹೊಸದಾಗಿ ಬಂದಿಲ್ಲವೆಂದುಕೊಂಡಿರಬಹುದು. ಅದಕ್ಕೆ ಕಾರಣವೂ ಇದೆ.
ಕೆಲವು ತಿಂಗಳ ಹಿಂದೆ ಅಂತರ್ಜಾಲದಲ್ಲಿ ದಾಸ ಸಾಹಿತ್ಯಕ್ಕೆಂದೇ ಮೀಸಲಾದ ಹರಿದಾಸ ಸಂಪದ ಆರಂಭವಾಗಿದೆ. ಹಾಗಾಗಿ, ನಾನು ಪುರಂದರ ದಾಸರ ರಚನೆಗಳನ್ನು ಹಾಕುವ ಬದಲು ಹರಿದಾಸ ಸಂಪದದಲ್ಲಿ ಹಾಕತೊಡಗಿರುವೆ. ಅಷ್ಟೇ ಅಲ್ಲದೆ, ಇತರ ದಾಸರ ರಚನೆಗಳೂ, ದಾಸರ ಬಗ್ಗೆ ಬರಹಗಳೂ ಅಲ್ಲಿ ನಿಮಗೆ ಸಿಗುತ್ತವೆ.
ನಿಮಗೆ ಯಾವುದಾದರೂ ದೇವರನಾಮ/ಉಗಾಭೋಗ/ಸುಳಾದಿಯ ಸಾಹಿತ್ಯ ಬೇಕಿದ್ದರೆ ನೀವು ಈ ಬ್ಲಾಗ್ ನಲ್ಲಿ [...]
Filed under: Uncategorized | Leave a Comment »
Posted on May 23, 2008 by neelanjana
ಧಣಿಯ ನೋಡಿದೆನಾ ವೆಂಕಟನ ಮನ-
ದಣಿಯೇ ನೋಡಿದೆನಾ! ||ಪಲ್ಲವಿ||
ಧಣಿಯ ನೋಡಿದೆ ಶಿಖಾಮಣಿ ತಿರುಮಲನಾ! ||ಅನುಪಲ್ಲವಿ||
ಕೇಸಕ್ಕಿ ಅನ್ನ ಉಂಬುವನಾ ಬಡ್ಡಿ
ಕಾಸು ಬಿಡದೇ ಹೊನ್ನ ಗಳಿಸುವನಾ!
ದೋಸೆ ಅನ್ನವ ಮಾರಿಸುವನಾ ತನ್ನ
ದಾಸರ ಮ್ಯಾಳದಿ ಕುಣಿದಾಡುತಿಹನಾ! ||೧||
ಬೆಟ್ಟದೊಳಗೆ ಇರುತಿಹನ ಮನ
ಮುಟ್ಟಿ ಭಜಿಪರಿಗಿಷ್ಟವ ಸಲ್ಲಿಸುವನಾ!
ಕೊಟ್ಟ ವರವ ತಪ್ಪದವನ
ಸೃಷ್ಟಿಗಧಿಕ ಶ್ರೀ ಪುರಂದರ ವಿಠಲನ! ||೨||
Filed under: ಧ | Leave a Comment »
Posted on March 26, 2008 by neelanjana
ಪಲ್ಲವಿ:
ಇನ್ನೂ ದಯಬಾರದೆ ದಾಸನ ಮೇಲೆ ?
ಅನುಪಲ್ಲವಿ:
ಪನ್ನಗಶಯನ ಪರಮಪುರುಷ ಹರಿಯೇ!
ಚರಣಗಳು:
ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ
ಕಾಮಾದಿ ಷಡ್ವರ್ಗ ಗಾಢಾಂಧಕಾರದಿ ಪಾಮರನಾಗಿಹ ಪಾತಕಿಯು
ಮಾ ಮನೋಹರನೆ ಚಿತ್ತಜ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ
ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಾಧೀನವಲ್ಲೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ
Filed under: ಇ | Tagged: ಇ | Leave a Comment »
Posted on March 20, 2008 by neelanjana
ಪಲ್ಲವಿ:
ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನು
ಚರಣ:
ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ
ಸಿಟ್ಟಲಿ ಕೋರೆದಾಡೆ ತಿವಿದನೆ ಅಹ ಗಟ್ಟಿ ಉಕ್ಕನು ಒಡೆದು ಬಂದನೆ
ಮೂರಡಿ ಭೂಮಿಯ ಬೇಡಿದನೆ ನೃಪರ ಬೇರನಳಿಯ ಕೊಡಲಿ ಪಿಡಿದನೆ
ನಾರಮಡಿಯನಿಟ್ಟು ಬಂದನೆ ಅಹ ಚೋರತನದಿ ಪಾಲ್ ಬೆಣ್ಣೆಯ ತಿಂದನೆ
ಬತ್ತಲೆ ನಾರಿಯರನಪ್ಪಿದ ಹೋಗಿ ಉತ್ತಮಾಶ್ವವವನು ಹತ್ತಿದ
ಹತ್ತವತಾರ ತಾಳಿದ ನಮ್ಮ ಭಕ್ತವತ್ಸಲ ಸ್ವಾಮಿ ಪುರಂದರ ವಿಠಲನು
Filed under: ಕ, ದಶಾವತಾರ | Tagged: ಕ, ದಶಾವತಾರ, dashavatara | Leave a Comment »
Posted on February 29, 2008 by neelanjana
ಪಲ್ಲವಿ:
ಪೊಂಗೊಳಲೂದುತಿಹ ಯದುಕುಲೋತ್ತುಂಗ
ಅನುಪಲ್ಲವಿ:
ತಿಂಗಳಪಾಂಗನೆ ರಜತ ಶುಭಾಂಗ
ಚರಣ:
1:
ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ
ಬಲಿಯ ಬೇಡಿದನು ಭೃಗು ಕುಲದಿ ಜನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ
ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ
2:
ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ
ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ
ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ
ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ
3:
ವಾರಿಚರ ಕೂರ್ಮಾವತಾರ ಸೂಕರ ಕ್ರೂರ
ಧರಣಿಯನೆಳೆದು ಶೂರರನು ಗೆಲಿದು
ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು
ಏರಿದನು ಹಯವ ಪುರಂದರ ವಿಠಲ ಜಗದೊಡೆಯ
Filed under: Uncategorized | Tagged: ದಶಾವತಾರ, ಪ, dashavatara | 2 Comments »
Posted on February 8, 2008 by neelanjana
ಪುರಂದರ ದಾಸ ಪ್ರಪಂಚಕ್ಕೆ ಸ್ವಾಗತ
ಇಲ್ಲಿ ಪುರಂದರದಾಸರ ರಚನೆಗಳ ಸಾಹಿತ್ಯವನ್ನು ಆಸಕ್ತರಿಗೆ ಕೊಡುವುದು ನನ್ನ ಉದ್ದೇಶ.
ಸಾಹಿತ್ಯದಲ್ಲಿ ಮಿಂಚುವ ಹೊಳಹುಗಳಿಗೆ, ಅಲ್ಲಲ್ಲಿ ಟಿಪ್ಪಣಿ ಹಾಕುವ ಉದ್ದೇಶವೂ ಇದೆ.
ನಿಮಗೆ ಯಾವುದಾದರೂ ಪುರಂದರದಾಸರ ರಚನೆಯನ್ನು ತಿಳಿಯಬೇಕಾಗಿದ್ದರೆ, ಒಂದು ಮರುಟಿಪ್ಪಣಿ ಹಾಕಿ.
ದಿನಾಲೂ, ಒಂದಾದರೂ ರಚನೆಯನ್ನು ಇಲ್ಲಿ ಹಾಕುವ ಉದ್ದೇಶವಿದೆ. ಹೇಗೆ ನಡೆಯುತ್ತದೋ, ನೋಡೋಣ!
Filed under: Uncategorized | Leave a Comment »