ಆರು ಬದುಕಿದರಯ್ಯ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ ||

ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ ||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆತೆ ||೧|

ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ || ೨ ||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯನರಿಯೆ
ದೊರೆಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಸಿಗಲೊಲ್ಲದು ಕೇಳೊ ಹರಿಯೇ! ||೩||

One Response

  1. Excellent !

Leave a Reply