ಪಲ್ಲವಿ:
ಆಡ ಹೋದಲ್ಲೆ ಮಕ್ಕಳು ಆಡಿಕೊಂಬುವರು ನೋಡಮ್ಮ
ಅನುಪಲ್ಲವಿ:
ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ
ಚರಣಗಳು:
ದೇವಕಿ ಹೆತ್ತಳಂತೆ ವಸುದೇವನೆಂಬುವ ಪಿತನಂತೆ
ಕಾವಲಲಿ ಹುಟ್ಟಿದೆಯಂತೆ ಮಾವಗಂಜಿಲ್ಲಿ ತಂದರಂತೆ ||೧||
ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ ಶಿಶುಗಾಲಲೊರಸಿದೆನಂತೆ ||೨||
ನೀನೆನ್ನ ಹಡೆದಿಲ್ಲವಂತೆ ನಾನು ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ ||೩||
ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ ಕೊಚ್ಚಲು ಧುಮಿಕಿದೆನಂತೆ ||೪||
ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ ಮುದ್ದು ಪುರಂದರ ವಿಟ್ಟಲನಂತೆ ||೫||
Filed under: ಆ