ಮುಯ್ಯಕ್ಕೆ ಮುಯ್ಯಿ ತೀರಿತು

ಪಲ್ಲವಿ:

ಮುಯ್ಯಕ್ಕೆ ಮುಯ್ಯಿ ತೀರಿತು ಜಗ-

ದಯ್ಯ ವಿಜಯ ಸಹಾಯ ಪಂಢರೀರಾಯ!

ಚರಣಗಳು:

ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಗಳ್ಳ ಕೃಷ್ಣ ಮರೆಯ ಮಾಡಿ
ಚಿನ್ನದ ಪಾತ್ರೆಯ ನೀರು ತಂದಿತ್ತರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||

ಎನ್ನ ಪೆಸರಹೇಳಿ ಸೂಳೆಗೆ ಕಂಕಣ
ವನ್ನು ನೀನು ಕೊಟ್ಟು ನಿಜವ ಮಾಡೆ
ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯ ತೋರಿದೆ ಪಂಢರಿರಾಯ ||

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಕಿತ್ತು ಈಡಾಡೋ ಇನ್ನೊಂದು ಕಂಕಣವ
ಮುಕ್ತಿಗೆ ನೀನಲ್ಲದಾರನು ಕಾಣೆನು
ಮುಕ್ತೀಶ ಪುರಂದರ ವಿಟ್ಠಲ ಪಂಢರಿರಾಯ ||

ಈ ಎರಡು ಚರಣಗಳಿಗೆ ಸ್ವಲ್ಪ ಬೇರೆಯಾದ ಇನ್ನೊಂದು ಪಾಠಾಂತರವೂ ಇದೆ:

ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ-
ವನ್ನು ನೀನಿತ್ತೆ ನಿಜರೂಪದಿ
ಎನ್ನ ಪಿಡಿಸಿ ಪರಮ ಭಂಡನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿಕೊಂಡೆಯಯ್ಯ! ||೨||

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧೀನನಾಗಿರಬೇಡವೇ
ಯುಕ್ತಿಯಲಿ ನಿನ್ನಂಥ ದೇವರ ನಾಕಾಣೆ
ಮುಕ್ತೀಶ ಪುರಂದರವಿಟ್ಠಲ ಪಂಢರಿರಾಯ ||೩||

Leave a Reply