ಊಟಕೆ ಬಂದೆವು ನಾವು-ನಿಮ್ಮ
ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||
ಕತ್ತಲಿಟ್ಟಾವಮ್ಮ ಕಣ್ಣು-ಬಾಯಿ
ಬತ್ತಿ ಬರುತಲಿದೆ ಕೈಕಾಲು ಝುಮ್ಮ
ಹೊತ್ತು ಹೋಗಿಸಬೇಡಮ್ಮ, ಒಂದು
ತುತ್ತಾದರೂ ಇತ್ತು ಸಲಹು ನಮ್ಮಮ್ಮ||೧||
ಒಡಲೊಳಗೆ ಉಸಿರಿಲ್ಲ-ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು-ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ||೨||
ಹೊನ್ನು ರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ-ಪ್ರ
ಸನ್ನ ಪುರಂದರವಿಠಲ ದೊರೆಯೇ ||೩||
Filed under: ಊ | Tagged: food, UTa | 1 Comment »